Tuesday, March 31, 2015

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ (751)

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ |
ಇನ್ನೊರ‍್ವನಿರಲನ್ಯತನವಿಲ್ಲದಿಲ್ಲ ||
ಅನ್ಯಮನವಿರೆ ಭಿನ್ನಮತ ಘರ್ಷೆಯಿರದಿಲ್ಲ |
ಭಿನ್ನದೊಳಭಿನ್ನನಿರು - ಮರುಳ ಮುನಿಯ || (೭೫೧)

(ಜೊತೆಗೆ+ಇನ್ನೊರ‍್ವನ್+ಇರದೆ)(ಇನ್ನೊರ‍್ವನ್+ಇರಲ್+ಅನ್ಯತನ+ಇಲ್ಲದೆ+ಇಲ್ಲ)(ಅನ್ಯಮನ+ಇರೆ)(ಘರ್ಷೆ+ಇರದೆ+ಇಲ್ಲ)(ಭಿನ್ನದ+ಒಳ್+ಅಭಿನ್ನನ್+ಇರು)

ಒಬ್ಬಂಟಿ ಜೀವನವು ಬೇಸರದಿಂದ ಕೂಡಿರುತ್ತದೆ. ತನ್ನ ಜೊತೆಗೆ ಸಂಗಡಿಗನೊಬ್ಬನಿದ್ದರೇನೇ ಜೀವನಕ್ಕೆ ರುಚಿ ಬರುವುದು. ಆದರೆ ಈ ರೀತಿಯಾಗಿ ಸಂಗಡಿಗನಿದ್ದರೂ ಸಹ, ಪ್ರತ್ಯೇಕತನ ಇದ್ದೇ ಇರುತ್ತದೆ. ಪ್ರತ್ಯೇಕವಾದ ಮನಸ್ಸಿರಲಾಗಿ, ಅಭಿಪ್ರಾಯ ವ್ಯತ್ಯಾಸಗಳು(ಭಿನ್ನಮತ) ಮತ್ತೂ ತಿಕ್ಕಾಟ(ಘರ್ಷೆ)ಗಳು ಇದ್ದೇ ಇರುತ್ತವೆ. ಆದ್ದರಿಂದ ನೀನು ಮಾತ್ರ ವ್ಯತ್ಯಾಸಗಳಲ್ಲಿ(ಭಿನ್ನದೊಳ್) ಘರ್ಷೆಣೆಯುಂಟಾಗದಂತೆ ಏಕಾತ್ಮವಾಗಿ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When there’s no companion there is no sweetness in life
Sense of separateness may persist even when there’s a companion
Other minds may cause different opinions and conflicts
But remain unruffled in spite of the outside splits – Marula Muniya
(Translation from "Thus Sang Marula Muniya" by Sri. Narasimha Bhat)

Monday, March 30, 2015

ದ್ವಂದ್ವವಿರೆ ಸುಂದರತೆ ಸುಂದರತೆಯಿಂದಾಶೆ (750)

ದ್ವಂದ್ವವಿರೆ ಸುಂದರತೆ ಸುಂದರತೆಯಿಂದಾಶೆ |
ಸಂದೀಪಿಸುವುದಾಶೆ ಜೀವಿತವ ಜೀವಂ ||
ಬಂಧುತೆಯನಾಗಿಪುದು ಬಾಂಧವ್ಯ ಸಂಸಾರ |
ದ್ವಂದ್ವ ಬಂಧನ ಸೃಷ್ಟಿ - ಮರುಳ ಮುನಿಯ || (೭೫೦)

(ದ್ವಂದ್ವ+ಇರೆ)(ಸುಂದರತೆ+ಇಂದ+ಆಶೆ)(ಸಂದೀಪಿಸುವುದು+ಆಶೆ)(ಬಂಧುತೆಯನ್+ಆಗಿಪುದು)

ತದ್ವಿರುದ್ಧತೆಗಳಿಂದ ಜೀವನಕ್ಕೆ ಸೊಗಸು ಬರುತ್ತದೆ. ಈ ಸೊಗಸನ್ನು ಹೊಂದಲು ಆಶೆಗಳು ಉದ್ಭವವಾಗುತ್ತವೆ. ಈ ರೀತಿಯಾಗಿ ಜೀವಿತವನ್ನು ಜೀವವು ಸೇರಲು ಆಶೆಯು ಕಾರಣಭೂತವಾಗುತ್ತದೆ. ನೆಂಟಸ್ತಿಕೆ ಮತ್ತು ಕುಟುಂಬ ಜೀವನಗಳು ಸಂಬಂಧಗಳನ್ನು ಉಂಟುಮಾಡುತ್ತವೆ. ಹೀಗೆ ಸೃಷ್ಟಿಯೆಲ್ಲ ಸಂಕೀರ್ಣ ಬಂಧನದಿಂದ ಕೂಡಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Beauty flowers from duality and from beauty arise desires,
Desires light up our lives and souls,
Desires build up relations and family is a formation of relations
This creation is a bond of dualities – Marula Muniya (750)
(Translation from "Thus Sang Marula Muniya" by Sri. Narasimha Bhat)

Friday, March 27, 2015

ಏತಕಿಂತಿದೆ ಜಗದ್ರಚನೆಯೆಂದೆನ್ನದಿರು (749)

ಏತಕಿಂತಿದೆ ಜಗದ್ರಚನೆಯೆಂದೆನ್ನದಿರು |
ಹೇತು ಕರ್ತೃವನರಿತು ನಿನಗಪ್ಪುದೇನು? ||
ನೀತಿಯೇನೆಂದು (ಲೋಕ) ಪ್ರಕೃತದಲಿ ಹಿತದ |
ರೀತಿಯನು ಬಗೆದು ತಿಳಿ - ಮರುಳ ಮುನಿಯ || (೭೪೯)

(ಏತಕೆ+ಇಂತು+ಇದೆ)(ಜಗದ್ರಚನೆ+ಎಂದು+ಎನ್ನದಿರು)(ಕರ್ತೃವನ್+ಅರಿತು)(ನಿನಗೆ+ಅಪ್ಪುದು+ಏನು)

ಜಗತ್ತನ್ನು ಈ ರೀತಿಯಾಗಿ ಏಕೆ ನಿರ್ಮಿಸಲಾಗಿದೆ ಎಂದೆನ್ನಬೇಡ. ಜಗತ್ತನ್ನು ರಚಿಸಿದವನ ಉದ್ದೇಶಗಳನ್ನು ನೀನು ತಿಳಿದುಕೊಂಡು ಆಗಬೇಕಾಗಿರುವುದೇನು? ಸದ್ಯದ ಪ್ರಪಂಚದ ನೀತಿ ನಿಯಮಗಳು ಏನೆಂಬುದನ್ನು ಮತ್ತು ಲೋಕಕ್ಕೆ ಹಿತವಾಗಿರುವುದರ ರೀತಿಯನ್ನು ಯೋಚಿಸಿ ತಿಳಿದಿಕೊಂಡರೆ ಅಷ್ಟು ಸಾಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ask not why the world is arranged like this,
What do you gain by knowing the cause and the Creator?
Reflect on and find out your proper present duty
And the proper way to work for the world’s welfare – Marula Muniya (749)
(Translation from "Thus Sang Marula Muniya" by Sri. Narasimha Bhat)

Thursday, March 26, 2015

ದೇವನುದ್ದೇಶವೇನೆಂದೆನಲು ನೀನಾರು? (748)

ದೇವನುದ್ದೇಶವೇನೆಂದೆನಲು ನೀನಾರು? |
ಅವಶ್ಯಕವೆ ನಿನ್ನನುಜ್ಞೆಯಾತಂಗೆ? ||
ಆವುದೋ ಪ್ರಭುಚಿತ್ತವೇನೋ ಅವನ ನಿಮಿತ್ತ |
ಸೇವಕಂಗೇತಕದು? - ಮರುಳ ಮುನಿಯ || (೭೪೮)

(ದೇವನ+ಉದ್ದೇಶ+ಏನೆಂದು+ಎನಲು)(ನೀನ್+ಆರು)(ನಿನ್ನ+ಅನುಜ್ಞೆ+ಆತಂಗೆ)(ಪ್ರಭುಚಿತ್ತ+ಏನೋ)
(ಸೇವಕಂಗೆ+ಏತಕೆ+ಅದು)

ಪರಮಾತ್ಮನ ಅಭಿಪ್ರಾಯ ಮತ್ತು ಗುರಿಗಳೇನೆಂದು ಕೇಳಲು ನೀನಾರು? ನಿನ್ನ ಒಪ್ಪಿಗೆಯ (ಅನುಜ್ಞೆ) ಅವಶ್ಯಕತೆ ಅವನಿಗಿದೆಯೇನು? ಒಡೆಯ(ಪ್ರಭು)ನ ಮನಸ್ಸು (ಚಿತ್ತ) ಹೇಗಿರುವುದೋ, ಅವನ ಕಾರಣಗಳೇನಿವೆಯೋ, ಅದರ ಬಗ್ಗೆ ಸೇವಕನಾದ ನಿನಗೆ ಚಿಂತೆ ಏಕೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who are you to enquire into the intentions of God?
Is your command necessary for Him to act?
What’s in the mind of the Master? What’s the cause of His action?
Asking like this is none of the servant’s business – Marula Muniya (748)
(Translation from "Thus Sang Marula Muniya" by Sri. Narasimha Bhat)

Wednesday, March 25, 2015

ಅರಸುತ್ತ ತತ್ತ್ವವನು ಬಹುದೂರ ಚರಿಸದಿರು (747)

ಅರಸುತ್ತ ತತ್ತ್ವವನು ಬಹುದೂರ ಚರಿಸದಿರು |
ಅರಿವಿಗೆಟುಕಿದನಿತ್ತನೆಡೆಬಿಡದೆ ಚರಿಸು ||
ತರುವಿನವೊಲರಿವು ತಾನಾಗಿ ಬೆಳೆವುದು ಸಾಜ |
ಹೊರಗುಂಟೆ ಬೇರ್ ಸಸಿಗೆ - ಮರುಳ ಮುನಿಯ || (೭೪೭)

(ಚರಿಸದೆ+ಇರು)(ಅರಿವಿಗೆ+ಎಟುಕಿದನ್+ಇತ್ತನ್+ಎಡೆಬಿಡದೆ)(ತರುವಿನ+ವೊಲ್+ಅರಿವು)(ಹೊರಗೆ+ಉಂಟೆ)

ಪರಮಾತ್ಮನ ತತ್ತ್ವವನ್ನು ಹುಡುಕುತ್ತಾ ಬಹಳ ದೂರ ಹೋಗಬೇಡ. ನಿನ್ನ ತಿಳುವಳಿಕೆ ಬಂದುದನ್ನು ಆದಷ್ಟು ನಿರಂತರವಾಗಿ ಆಚರಿಸು. ಗಿಡ, ಮರ(ತರು)ಗಳಂತೆ ತಿಳುವಳಿಕೆ(ಅರಿವು)ಯೂ ಸಹ ಸಹಜವಾಗಿ ನಿನ್ನಲ್ಲಿ ಬೆಳೆಯಬೇಕು. ಒಂದು ಸಸಿಗೆ ಬೇರು ಹೊರಗಡೆ ಇರುತ್ತದೇನು? ಅದು ಸಹಜವಾಗಿ ಒಳಗಡೆಯೇ ಬೆಳೆಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Go not too far exploring the Truth in remote regions,
Practice regularly what you understand well,
Your knowledge has to grow naturally on its own like a tree,
Do the roots of a plant grow above ground – Marula Muniya
(Translation from "Thus Sang Marula Muniya" by Sri. Narasimha Bhat)

Tuesday, March 24, 2015

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ (746)

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ- |
ಕಾತುರಿಸಬೇಡಾತ್ಮ ಪರಿಪಾಕಕೆಂದುಂ ||
ಆತುರಾನ್ನದೊಳರ್ಧಪಕ್ವಾತಿಪಕ್ವಗಳು |
ಯಾತನೆಗೆ ಮೂಲವಲೆ - ಮರುಳ ಮುನಿಯ || (೭೪೬)

(ಆತುರಿಸದೆ+ಇರು)(ಮುಕ್ತಿಗೆ+ಆತುರಿಸದೆ+ಇರು)(ತತ್ತ್ವಕೆ+ಆತುರಿಸಬೇಡ+ಆತ್ಮ)(ಪರಿಪಾಕಕೆ+ಎಂದುಂ)(ಆತುರ+ಅನ್ನದ+ಒಳ್+ಅರ್ಧಪಕ್ವ+ಅತಿಪಕ್ಷಗಳು)(ಮೂಲ+ಅಲೆ)

ಮೋಕ್ಷವನ್ನು ಪಡೆಯಲು ಆತುರಿಸಬೇಡ. ಪರಮಾತ್ಮನ ತತ್ತ್ವವನ್ನು ಅರಿಯಲು ಆತುರಪಡಬೇಡ. ಆತ್ಮವನ್ನು ಸಂಪೂರ್ಣವಾಗಿ ಪಕ್ವಗೊಳಿಸಲು ಆತುರದ ಕೆಲಸ ಮಾಡಿದರೆ ಆಗುವುದಿಲ್ಲ. ಅಕ್ಕಿಯನ್ನು ಬೇಯಿಸುವಾಗ ಆತುರಪಟ್ಟರೆ, ಕೆಲವು ಭಾಗದಲ್ಲಿರುವ ಅಕ್ಕಿಯು ಅರ್ಧಬೆಂದು ಕೆಲವು ಭಾಗದಲ್ಲಿರುವ ಅಕ್ಕಿಯು ಹೆಚ್ಚಾಗಿ ಬೆಂದುಹೋಗುತ್ತದೆ. ಆತುರದ ಕಾರ್ಯಗಳು ವೇದನೆಗೆ ಕಾರಣವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Hurry not for salvation and hurry not for the realization of the Truth
Hurry not for the ripening and refinement of the soul
Rice cooked in haste may become half cooked or overcooked
Hurry is the root of worry and pain – Marula Muniya
(Translation from "Thus Sang Marula Muniya" by Sri. Narasimha Bhat)

Monday, March 23, 2015

ದುರಿತಲೋಕದಿನಳಿವುದೆಂದೆನುತ ಕೇಳದಿರು (745)

ದುರಿತಲೋಕದಿನಳಿವುದೆಂದೆನುತ ಕೇಳದಿರು |
ಅರಿವರಾರದರ ಹುಟ್ಟೆಂದೊ ಮುಗಿವೆಂದೊ ||
ನೆರವೊ ನೀನದಕೆ ನೆರವಲ್ಲವೋ ಪೇಳದನು |
ಚರಿತೆ ನಿನ್ನದು ಮುಖ್ಯ - ಮರುಳ ಮುನಿಯ || (೭೪೫)
(ದುರಿತ+ಲೋಕದಿನ್+ಅಳಿವುದು+ಎಂದು+ಎನುತ)(ಅರಿವರ್+ಆರ್+ಅದರ)(ನೆರವು+ಅಲ್ಲವೋ)(ಪೇಳ್+ಅದನು)
ಜಗತ್ತಿನಿಂದ ಪಾಪ(ದುರಿತ)ಕಾರ್ಯಗಳು ಎಂದಿಗೆ ಕೊನೆಗೊಳ್ಳುತ್ತವೆಯೆಂದು ಕೇಳಬೇಡ. ಅವು ಯಾವಾಗ ಹುಟ್ಟುವುದೋ ಮತ್ತು ಎಂದಿಗೆ ಮುಗಿಯುತ್ತವೆಯೋ ಯಾರಿಗೂ ತಿಳಿಯದು. ಮುಖ್ಯವಾಗಿ ನೀನು ಆ ಕಾರ್ಯಗಳಿಗೆ ಸಹಾಯಕವಾಗಿರುವೆಯೋ ಇಲ್ಲವೋ, ಅದನ್ನು ಮೊದಲು ಹೇಳು. ಜಗತ್ತಿನಲ್ಲಿ ನೀನು ಹೇಗೆ ನಡೆದುಕೊಳ್ಳುತ್ತಿರುವೆ ಎನ್ನುವುದು ಮುಖ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ask not when sorrow and suffering would come to an end in the world,
Who knows when it started and when it will end?
But make sure whether you support it or oppose it,
Your conduct for the cause is of paramount importance – Marula Muniya (745)
(Translation from "Thus Sang Marula Muniya" by Sri. Narasimha Bhat)

Friday, March 20, 2015

ಏಕಾಂತದಂತೆ ಲೋಕಾಸ್ಥೆ ಮಠದಂತೆ ಮನೆ (744)

ಏಕಾಂತದಂತೆ ಲೋಕಾಸ್ಥೆ ಮಠದಂತೆ ಮನೆ |
ಬೇಕು ತತ್ತ್ವದ ತಾನೆ ಕಂಡನುಭವಿಸಲು ||
ಕಾಕುತ್ಸ್ಥನೇಂ ಯತಿಯೆ? ಗೋಕುಲೇಶಂ ವ್ರತಿಯೆ?
ಸಾಕಹಮ ತುಳಿದಿರಲು - ಮರುಳ ಮುನಿಯ || (೭೪೪)

(ಲೋಕ+ಆಸ್ಥೆ)(ಕಂಡು+ಅನುಭವಿಸಲು)(ಗೋಕುಲ+ಈಶಂ)(ಸಾಕು+ಅಹಮ)(ತುಳಿದು+ಇರಲು)

ಜಗತ್ತಿನ ಜೊತೆ ಪ್ರೀತಿಯಿಂದಿರಬೇಕು. ಆದರೆ ಒಬ್ಬಂಟಿಯಾಗಿ ಆಲೋಚಿಸುವಂತಿರಬೇಕು. ಮನೆಯನ್ನು ಅದು ಮಠವೆಂದಂತೆ ಭಾವಿಸಿ ಜೀವಿಸಬೇಕು. ಪರಮಾತ್ಮನ ತತ್ತ್ವವನ್ನು ನೋಡಿ ಅನುಭವಿಸಲು ಈ ಎರಡನ್ನು ಅನುಸರಿಸಬೇಕು. ಶ್ರೀರಾಮ(ಕಾಕುತ್ಸ್ಥ)ನು ಸನ್ಯಾಸಿಯಾಗಿದ್ದನೇನು? ಶ್ರೀ ಕೃಷ್ಣ (ಗೋಕುಲೇಶ) ಪರಮಾತ್ಮ ವ್ರತನಿರತನಾಗಿದ್ದನೇನು? ನೀನು ನಿನ್ನ ಅಹಂಕಾರವನ್ನು ಹತ್ತಿಕ್ಕಿಕೊಂಡಿದ್ದರೆ ಸಾಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Necessary is guanine interest in life as in solitude and in house as in monastery
So that one can see and personally experience the divine truth.
Was Sri Rama a mendicant? Was Sri Krishna an ascetic?
It is quite enough if one tramples down one’s ego – Marula Muniya (744)
(Translation from "Thus Sang Marula Muniya" by Sri. Narasimha Bhat) #dvg,#kagga

Thursday, March 19, 2015

ಬದುಕು ಬದುಕೊಳ್ಬದುಕೆ ಬದುಕಸೆರೆಯಿಂ ನಿನಗೆ (743)

ಬದುಕು ಬದುಕೊಳ್ಬದುಕೆ ಬದುಕಸೆರೆಯಿಂ ನಿನಗೆ |
ಬಿಡುಗಡೆಯೊ ಮದುವೆಯಾಗದು ಬೇವುಬೆಲ್ಲ ||
ಎದುರಿಸೆಲ್ಲ ಪರೀಕ್ಷೆಗಳ ವಿಧಿಕೊಟ್ಟಂತೆ |
ಸುಧೆಯಿರ‍್ಪುದಾಳದಲಿ - ಮರುಳ ಮುನಿಯ || (೭೪೩)

(ಬದುಕೊಳ್+ಬದುಕೆ)(ಎದುರಿಸು+ಎಲ್ಲ)(ಸುಧೆ+ಇರ‍್ಪುದು+ಆಳದಲಿ)

ಜೀವನವನ್ನು ಜೀವಿಸಿಯೇ ನಡೆಸು. ಅದರಿಂದಲೇ ಅದರ ಬಂಧನದಿಂಡ ನಿನಗೆ ಬಿಡುಗಡೆಯಾಗುತ್ತದೆ. ಬೇವು-ಬೆಲ್ಲ ಮತ್ತು ಸಿಗಿ-ಕಹಿಗಳು ಎಂದಿಗೂ ಒಂದಾಗಲಾರವು. ಆದುದ್ದರಿಂದ ವಿಧಿಯು ನಿನಗೆ ಕೊಟ್ಟಿರುವ ಶಿಕ್ಷೆ ಮತ್ತು ಪರೀಕ್ಷೆಗಳನ್ನು ಅದು ಹೇಗೆ ಕೊಡುತ್ತದೋ ಹಾಗೆಯೇ ಧೈರ್ಯದಿಂದ ಎದುರಿಸು. ಆಗ ತಳದಲ್ಲಿರುವ ಅಮೃತವು ನಿನಗೆ ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Live your life, living the life well itself releases from the prison of life,
There can be no marriage between neem and sweet jam,
Face all tests as arranged by Fate,
Ambrosia lies deep within – Marula Muniya (743)
(Translation from "Thus Sang Marula Muniya" by Sri. Narasimha Bhat)

Wednesday, March 18, 2015

ಬದುಕು ಬದುಕಿಂದಲೊಳ್ ಬದುಕೆ ಬಿಡುಗಡೆ ನಿನಗೆ (742)

ಬದುಕು ಬದುಕಿಂದಲೊಳ್ ಬದುಕೆ ಬಿಡುಗಡೆ ನಿನಗೆ |
ಎದುರಿಸುತೆ ಬಿದಿಯ ಶಿಕ್ಷೆ ಪರೀಕ್ಷೆಗಳನೆಲ್ಲ ||
ಸೊದೆ ತಳದೊಳಿಹುದು ನೀಂ ಬದುಕೆಲ್ಲರಂತೆ |
ಅದಿರದಿರು ಬಿದಿಯೆದುರು - ಮರುಳ ಮುನಿಯ || (೭೪೨)

(ಪರೀಕ್ಷೆಗಳನ್+ಎಲ್ಲ)(ತಳದ+ಒಳು+ಇಹುದು)(ಬದುಕು+ಎಲ್ಲರಂತೆ)(ಅದಿರದೆ+ಇರು)(ಬಿದಿ+ಯೆದುರು)

ವಿಧಿಯು ನಿನಗೆ ವಿಧಿಸಿರುವ ಶಿಕ್ಷೆ ಮತ್ತು ಪರೀಕ್ಷೆಗಳೆಲ್ಲವನ್ನೂ ಧೈರ್ಯದಿಂದ ಎದುರಿಸುತ್ತಾ, ಬದುಕಿನೊಳಗಡೆಯೇ ಬದುಕು. ಇದರಿಂದಲೇ ನಿನಗೆ ಬಿಡುಗಡೆ. ಅಮೃತವು ತಳಗಡೆ ಇದೆ. ಅದು ದೊರಕಲು ವಿಧಿಯ ಎದುರು ಹೆದರದೆ ಬೆದರದೆ ಎಲ್ಲರಂತೆ ಬದುಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Live your life well, living a noble life itself is liberation to you,
Live your life like all others, ambrosia is at the bottom
Live braving all punishment and tests of Fate
Fear not and tremble not before Fate – Marula Muniya (742)
(Translation from "Thus Sang Marula Muniya" by Sri. Narasimha Bhat)

Tuesday, March 17, 2015

ವೇಶ್ಯೆಯಾದೊಡವೆ ತಾನೊರ‍್ವಳಾಂತರ್ಯದಲಿ (741)

ವೇಶ್ಯೆಯಾದೊಡವೆ ತಾನೊರ‍್ವಳಾಂತರ್ಯದಲಿ |
ಬಾಹ್ಯದಲಿ ಬಯಸಿ ಬೆಲೆಯಿತ್ತವನಿಗೊಡವೆ ||
ಆತ್ಮೀಯ ನೀನಂತರಂಗದಲಿ ಬಾಹ್ಯ ಪರ- |
ವಶ್ಯನಾಗಿಹೆಯಯ್ಯ - ಮರುಳ ಮುನಿಯ || (೭೪೧)

(ವೇಶ್ಯೆ+ಆದ+ಒಡವೆ)(ತಾನ್+ಒರ‍್ವಳ್+ಆಂತರ್ಯದಲಿ)(ಬೆಲೆಯಿತ್ತವನಿಗೆ+ಒಡವೆ)
(ನೀನ್+ಅಂತರಂಗದಲಿ)(ಪರವಶ್ಯನ್+ಆಗಿ+ಇಹೆ+ಅಯ್ಯ)

ಹೊರಗಿನ ಬದುಕಿನಲ್ಲಿ ಅವಳು ವೇಶ್ಯೆಯಾದರೂ ಸಹ ಅಂತರಂಗದಲ್ಲಿ ತಾನೇ ತಾನಾಗಿರುತ್ತಾಳೆ. ಸೌಂದರ್ಯವನ್ನು ಅಪೇಕ್ಷಿಸಿ ಬಂದವನಿಗೆ ಅವಳು ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ. ನೀನೂ ಸಹ ನಿನ್ನಂತರಂಗದಲ್ಲಿ ನಿನಗೆ ನೀನೇ ಆಗಿ ಆತ್ಮೀಯನಾದರೂ, ಬಾಹ್ಯ ಜಗತ್ತಿನಲ್ಲಿ ಬೇರೆಯವರ ಅಧೀನನಾಗಿರುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A call girl is inwardly a line ornament,
But outwardly she is an ornament of all those who pay the price,
You also are alone in self but outwardly,
You belong to many – Marula Muniya (741)
(Translation from "Thus Sang Marula Muniya" by Sri. Narasimha Bhat)

Friday, March 13, 2015

ಪಟ್ಟುತೀರಲೆ ಬೇಕು ಪಟ್ಟುತೀರಲೆ ಬೇಕು (740)

ಪಟ್ಟುತೀರಲೆ ಬೇಕು ಪಟ್ಟುತೀರಲೆ ಬೇಕು |
ಕಟ್ಟಾಜ್ಞೆ ವಿಧಿಯದಿದು ಪಟ್ಟು ನೀಂ ತೀರು ||
ಕಷ್ಟವೋ ನಿಷ್ಠುರವೊ ದುಷ್ಟಸಹವಾಸವೋ |
ಗಟ್ಟಿಮನದಿಂದೆ ಪಡು - ಮರುಳ ಮುನಿಯ || (೭೪೦)

(ವಿಧಿಯದು+ಇದು)

ನೀನು ಅನುಭವಿಸಲೇ ಬೇಕಾದ ಕಷ್ಟಕೋಟಲೆಗಳನ್ನು, ನೀನು ಅನುಭವಿಸಿ ತೀರಿಸಲೇಬೇಕು. ಇದು ವಿಧಿಯು ನಿನಗೆ ವಿಧಿಸಿರುವ ಕಠಿಣವಾದ ಶಾಸನ (ಕಟ್ಟಾಜ್ಞೆ). ಅವು ತೊಂದರೆ ಮತ್ತು ಸಂಕಟಗಳಾಗಿರಬಹುದು ಅಥವಾ ಕೆಟ್ಟವರ ಸಂಗಗಳಾಗಿರಬಹುದು. ನಿನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು, ಆ ಸ್ಥಿತಿಗಳನ್ನನುಭವಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

We must bear and pay the debt in full, bear and pay the debt,
This is the ordinance of Fate, we must bear and pay the debt,
It may be unbearable suffering, or unkindness or wicked company
Put up with it with a firm mind – Marula Muniya (740)
(Translation from "Thus Sang Marula Muniya" by Sri. Narasimha Bhat)

Thursday, March 12, 2015

ಬಡವರೊಳು ಬಡವನಹ ಧನಿಕರೊಳು ಧನಿಕನಹ (739)

ಬಡವರೊಳು ಬಡವನಹ ಧನಿಕರೊಳು ಧನಿಕನಹ |
ಹುಡುಗರೊಳು ಹುಡುಗನಹ ಮುದುಕರೊಳು ಮುದುಕಂ ||
ಪಡುವನವನೆಲ್ಲರೊಡನವರವರ ಪಾಡುಗಳ |
ಕೆಡದೆ ತನ್ನೊಳು ಯೋಗಿ - ಮರುಳ ಮುನಿಯ || (೭೩೯)

(ಬಡವನ್+ಅಹ)(ಧನಿಕನ್+ಅಹ)(ಪಡುವನು+ಅವನು+ಎಲ್ಲರೊಡನೆ+ಅವರವರ)(ತನ್ನ+ಒಳು)

ಯೋಗಿಯಾಗಿರುವವನು, ಬಡವನ ಜೊತೆ ಬಡವನಾಗಿಯೂ, ಶ್ರೀಮಂತರ ಜೊತೆ ಶ್ರೀಮಂತನಾಗಿಯೂ, ಹುಡುಗರ ಜೊತೆ ಹುಡುಗನಾಗಿಯೂ, ಮುದುಕರ ಜೊತೆ ಮುದುಕನಾಗಿಯೂ ಅವರುಗಳು ಅನುಭವಿಸುತ್ತಿರುವ ಅವಸ್ಥೆ ಮತ್ತು ಸ್ಥಿತಿಗಳನ್ನು ತಾನ್ನು ಅವುಗಳಿಂದ ಕೆಡದೆ ಅನುಭವಿಸುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The yogi lives as a poor man when among the poor,
As a rich man when among the wealthy, he joins the children
As a child and behaves like an old man among the old,
He plays all different roles suitable to the company he keeps,
But never parts with his purity and identity – Marula Muniya (739)

Wednesday, March 11, 2015

ಅಗ್ನಿವೊಲ್ ವ್ಯಕ್ತಿತೇಜಂ ಸಮಿಧೆಯದಕೆ ಸಂ (738)

ಅಗ್ನಿವೊಲ್ ವ್ಯಕ್ತಿತೇಜಂ ಸಮಿಧೆಯದಕೆ ಸಂ- |
ಲಗ್ನಮಾಗದೊಡನಾಗ ಬೂದಿಯಪ್ಪುದದು ||
ಭಗ್ನವಾಗವೆ ರಾಷ್ಟ್ರ ಜನ ಧರ್ಮಸಂಸ್ಥೆಗಳ್ |
ವಿಘ್ನಿತನಿರಲ್ ವ್ಯಕ್ತಿ - ಮರುಳ ಮುನಿಯ || (೭೩೭)

(ಸಮಿಧೆ+ಅದಕೆ)(ಸಂಲಗ್ನಂ+ಆಗದೊಡನ್+ಆಗ)(ಬೂದಿ+ಅಪ್ಪುದು+ಅದು)(ಭಗ್ನವು+ಆಗವೆ)(ವಿಘ್ನಿತನ್+ಇರಲ್)

ಮನುಷ್ಯನು ಬೆಂಕಿಯಂತೆ, ಅವನ ತೇಜಸ್ಸು (ತೇಜ) ಅದಕ್ಕೆ ಕಟ್ಟಿಗೆ (ಸಮಿಧೆ). ಸರಿಯಾಗಿ ಸಂಬಂಧ ಉಂಟಾಗದಿದ್ದಲ್ಲಿ ಅದು ಬೂದಿಯಾಗಿ ಹೋಗುತ್ತದೆ. ಇದೇ ರೀತಿ ದೇಶ, ಜನ ಮತ್ತು ಧರ್ಮಸಂಸ್ಥೆಗಳೂ ಸಹ ವ್ಯಕ್ತಿಯು ಸಮರಸನಾಗಿ ಬೆರೆಯದೆ ವಿಘ್ನಕಾರಿ ಆದರೆ (ವಿಘ್ನಿತನ್) ಮುರಿದುಬೀಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Personal radiance is like a blazing fire,
When firewood touches fire, it burns and turns into ash,
When individuals live like separate islands, won’t
Community, nation and religious institutions disintegrate? – Marula Muniya (738)
(Translation from "Thus Sang Marula Muniya" by Sri. Narasimha Bhat)

Tuesday, March 10, 2015

ಊರ ಕೈ ಹಸುಳೆ ನೀಂ ನೂರಡಿಗೆ ಮೆಟ್ಟುಶಿಲೆ (737)

ಊರ ಕೈ ಹಸುಳೆ ನೀಂ ನೂರಡಿಗೆ ಮೆಟ್ಟುಶಿಲೆ |
ಪೂರಕವೊ ನಿನ್ನ ಬಾಳ್ಗುಳಿದ ಲೋಕದ ಬಾಳ್ ||
ಓರೊಂಟಿಯಿರುವೆವೆನ್ನುವೆಯ ಅದು ಬಾಳ್ವೆಯೇಂ? |
ಮಾರಕವೊ ಬೇರೆತನ - ಮರುಳ ಮುನಿಯ || (೭೩೭)

(ನೂರ್+ಅಡಿಗೆ)(ಬಾಳ್ಗೆ+ಉಳಿದ)(ಓರ್+ಒಂಟಿ+ಇರುವೆ+ಎನ್ನುವೆಯ)

ನೀನು ಊರಿನ ಕೈ ಮಗು. ನೂರಾರು ಜನರ ಅಡಿಗಳಿಗೆ ತುಳಿಯುವ ಕಲ್ಲಾಗುತ್ತೀಯೆ (ಮೆಟ್ಟುಶಿಲೆ). ಆದುದ್ದರಿಂದ ನಿನ್ನ ಜೀವನಕ್ಕೆ ಉಳಿದವರ ಜೀವನವು ಆಸರೆಯಾಗುತ್ತದೆ. ನನಗೆ ಇನ್ಯಾರೂ ಬೇಕಾಗಿಲ್ಲ, ನಾನು ಒಬ್ಬಂಟಿಯಾಗೇ ಇರುವೆನೆಂದು ಹೇಳುವುಯೇನು? ಒಂಟಿ ಬಾಳು ಒಂದು ಬಾಳೇನು? ಈ ರೀತಿಯಾಗಿ ಪ್ರತ್ಯೇಕವಾಗಿರುವುದು ನಿನ್ನ ನಾಶನ(ಮಾರಕ)ಕ್ಕೆ ಕಾರಣವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You are a foster child of the community and a stepping stone for hundreds of feet.
The life of the world supports and complements your life,
Do you wish to live all alone and aloof? Is such life worthwhile?
Separateness is ruinous – Marula Muniya (737)
(Translation from "Thus Sang Marula Muniya" by Sri. Narasimha Bhat)

Monday, March 9, 2015

ಅಗಣಿತದ ವಿವಿಧಪರಿಮಾಣದ ಗುಣಗ್ರಂಥಿ (736)

ಅಗಣಿತದ ವಿವಿಧಪರಿಮಾಣದ ಗುಣಗ್ರಂಥಿ |
ಬಗೆಗೊಳ್ವುದೊಂದು ಜೀವ ವ್ಯಕ್ತಿಯಾಗಿ ||
ಮಗುಳೆ ತಾನೀವುದದು ಸಹಜೀವಿಗಳ್ಗೆನಿತೊ |
ಸ್ವಗುಣಾಂಶ ಲೇಶಗಳ - ಮರುಳ ಮುನಿಯ || (೭೩೬)

(ಬಗೆಗೊಳ್ವುದು+ಒಂದು)(ತಾನ್+ಈವುದು+ಅದು)(ಸಹಜೀವಿಗಳ್ಗೆ+ಎನಿತೊ)(ಸ್ವಗುಣ+ಅಂಶ)

ಈ ರೀತಿಯಾಗಿ ನಮ್ಮ ಗಣನೆಗೆ ಸಿಗದಂತಹ ಬಗೆಬಗೆಯ ಅಳತೆ(ಪರಿಮಾಣ)ಗಳಿಂದ ಕೂಡಿಕೊಂಡಿರುವ ಸ್ವಭಾವಗಳ ಗಂಟು(ಗ್ರಂಥಿ)ಗಳು ಒಂದು ಸಲ ಜೀವಿ ಮತ್ತು ವ್ಯಕ್ತಿಯಾಗಿ ಮಾರ್ಪಡುತ್ತದೆ. ತನ್ನಲ್ಲಿರುವ ಸ್ವಭಾವದ ಭಾಗಗಳ ತುಣುಕು(ಲೇಶ)ಗಳನ್ನು ಅದು ಪುನಃ (ಮಗುಳೆ) ತನ್ನ ಜೊತೆಯಲ್ಲಿರುವ ಜೀವಿಗಳಿಗೂ ಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Innumerable glands of different qualities and volumes
Come together and take shape as an embodied soul.
Portions of many of its qualities it then lends again
To its fellow beings – Marula Muniya (736)
(Translation from "Thus Sang Marula Muniya" by Sri. Narasimha Bhat)

Friday, March 6, 2015

ಎಲೆಹಸಿರತೊಡುವುದೆಲೆಯೊಳಿಹ ಹುಳುವಿನ ತೊಗಲು (735)

ಎಲೆಹಸಿರತೊಡುವುದೆಲೆಯೊಳಿಹ ಹುಳುವಿನ ತೊಗಲು |
ಕೊಳುವುದದು ತೊಗಟೆಯಿಂ ತೊಗಟೆ ಬಣ್ಣವನು ||
ಇಳಿವುವಂತೆಯೆ ಜೀವದೊಳಕೆ ಪರಿಸರದ ಗುಣ |
ಒಳಗಹುದು ಹೊರಗಣದು - ಮರುಳ ಮುನಿಯ || (೭೩೫)

(ಎಲೆ+ಹಸಿರ+ತೊಡುವುದು+ಎಲೆಯ+ಒಳ್+ಇಹ)(ಕೊಳುವುದು+ಅದು)(ಇಳಿವುವು+ಅಂತೆಯೆ)(ಜೀವದ+ಒಳಕೆ)(ಒಳಗೆ+ಅಹುದು)

ಗಿಡದ ಎಲೆಯ ಮೇಲಿರುವ ಒಂದು ಹುಳದ ಚರ್ಮ(ತೊಗಲು)ದ ಬಣ್ಣವು ಆ ಎಲೆಯ ಹಸಿರಿನ ಬಣ್ಣವನ್ನು ಧರಿಸುತ್ತದೆ. ಅದು ಗಿಡದ ತೊಗಟೆಯ ಮೇಲಿದ್ದರೆ, ಅದು ಆ ತೊಗಟೆಯ ಬಣ್ಣವನ್ನು ಪಡೆದುಕೊಳ್ಳುತ್ತದೆ. ಜೀವಿಗಳೊಳಗೆ ಇದೇ ರೀತಿ ಅವುಗಳ ಸುತ್ತಮುತ್ತಲಿನ ಸನ್ನಿವೇಶದ ಸ್ವಭಾವಗಳು ಇಳಿದುಬರುತ್ತದೆ. ಬಾಹ್ಯದಲ್ಲಿರುವ ಲಕ್ಷಣಗಳು ಈ ರೀತಿ ಒಳಗಡೆ ಇರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A worm living in leaves puts on the garment of green
When it lives on the bark of tree it wears the bark-coloured coat
Likewise the quality of environment sinks into the soul,
What exists outside enters inside – Marula Muniya (735)
(Translation from "Thus Sang Marula Muniya" by Sri. Narasimha Bhat)

Thursday, March 5, 2015

ಸೃಷ್ಟಿಯುಚ್ಛ್ವಾಸನಿಶ್ವಾಸಗಳೆ ನಿನ್ನುಸಿರು (734)

ಸೃಷ್ಟಿಯುಚ್ಛ್ವಾಸನಿಶ್ವಾಸಗಳೆ ನಿನ್ನುಸಿರು |
ಬಟ್ಟಬಯಲೆಲೆ ನೀನವಳವೇಗದುಸಿರೊಳ್ ||
ಇಷ್ಟ ನಿನಗೊಲಿದುಸಿರೆ ಕಷ್ಟ ಮುನಿದುಸಿರಲವಳ್ |
ಅಷ್ಟೆ ನಿನ್ನಸ್ತಿತ್ವ - ಮರುಳ ಮುನಿಯ || (೭೩೪)

(ಸೃಷ್ಟಿಯ+ಉಚ್ಛ್ವಾಸ+ನಿಶ್ವಾಸಗಳೆ)(ನೀನ್+ಅವಳ+ವೇಗದ+ಉಸಿರೊಳ್)(ನಿನಗೆ+ಒಲಿದು+ಉಸಿರೆ)(ಮುನಿದು+ಉಸಿರಲ್+ಅವಳ್)(ನಿನ್ನ+ಅಸ್ತಿತ್ವ)

ಸೃಷ್ಟಿಯು ಗಾಳಿಯನ್ನು ತನ್ನೊಳಗಡೆಗೆ ತೆಗೆದುಕೊಂಡು ಮತ್ತು ಬಿಡುವುದೇ ನಿನ್ನ ಉಸಿರಾಟ. ಸೃಷ್ಟಿಯ ಉಸಿರಾಟದ ವೇಗಕ್ಕೆ ತಕ್ಕಂತೆ ನೀನು ಕಾಣಿಸಿಕೊಳ್ಳುತ್ತೀಯೆ. ಅವಳು ಕೋಪಿಸಿಕೊಂಡು ಉಸಿರು ಬಿಟ್ಟಲ್ಲಿ ನಿನಗೆ ಕಷ್ಟ ಉಂಟಾಗುತ್ತದೆ. ನಿನ್ನ ಇರುವಿಕೆ (ಅಸ್ತಿತ್ವ) ಇಷ್ಟು ಮಾತ್ರ ಎಂಬುದನ್ನು ತಿಳಿದುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Inhalation and exhalation of Nature is your life breath
You are just a leaf in the open plain to Her surging breath
Blessing to you if She breathes in love and curse if She breathes in anger.
Your existence is just this much – Marula Muniya (734)
(Translation from "Thus Sang Marula Muniya" by Sri. Narasimha Bhat)

Tuesday, March 3, 2015

ಮಮತೆಯಾ ಬಿಂದುವಲೆಯಲೆಯಾಗಿ ಹರಡುತ್ತೆ (732)

ಮಮತೆಯಾ ಬಿಂದುವಲೆಯಲೆಯಾಗಿ ಹರಡುತ್ತೆ |
ರಮಣಿ ಗೃಹ ಕುಲ ದೇಶ ಭೂವಲಯಗಳಲಿ ||
ಶ್ರಮದೆ ಪರಿಯುತೆ ಕಡೆಗೆ ವಿಶ್ವಪ್ರಪಂಚದಲಿ |
ವಿಮಲ ಸುಖರಸವಕ್ಕೆ - ಮರುಳ ಮುನಿಯ || (೭೩೨)

(ಬಿಂದು+ಅಲೆ+ಅಲೆಯಾಗಿ)(ಸುಖರಸ+ಅವಕ್ಕೆ)

ಯಾವ ಜೀವಿಗಳ ಪ್ರೀತಿಯ ಹನಿಯು ಅಲೆ ಅಲೆಯಾಗಿ ವಿಸ್ತರಿಸುತ್ತಾ, ಪತ್ನಿ, ಮನೆ, ವಂಶ ಮತ್ತು ಭೂಮಿಯ ವಿಧವಿಧವಾದ ಪ್ರದೇಶ ಮತ್ತು ಭಾಗಗಳಲ್ಲಿ ಪ್ರಯಾಸದಿಂದ ಹರಿಯುತ್ತಾ ಕೊನೆಗೆ ಈ ವಿಶ್ವವೆಂಬ ಜಗತ್ತಿನಲ್ಲಿ ಸೇರಿಹೋಗುತ್ತದೋ ಅಂತಹ ಜೀವಿಗಳಿಗೆ ಪವಿತ್ರ ಮತ್ತು ಸ್ವಚ್ಛವಾದ ಸುಖದ ಸವಿ ಉಂಟಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Drops of love spread around in rings of ripples
They flow embracing wife, family, community, countries and continents
They flow and flow and fill the whole universe
With the nectar of pure happiness – Marula Muniya (732)
(Translation from "Thus Sang Marula Muniya" by Sri. Narasimha Bhat) #dvg,#kagga

Monday, March 2, 2015

ತಂದೆ ತಾಯ್ ಬಾಂಧವರನಾದಿಯಿಂ ಬಂದವರು (731)

ತಂದೆ ತಾಯ್ ಬಾಂಧವರನಾದಿಯಿಂ ಬಂದವರು |
ಇಂದು ನಿನ್ನೆಡಬಲಂಗಳಲಿ ನಡೆವವರುಂ ||
ಸಂಧಿಯೊಂದಿಹರು ನಿನ್ನೊಳು ಗೂಢ ನೀಂ (ದಿಟದಿ) |
ಹಿಂದಿಂದುಗಳ ಕೂಸು - ಮರುಳ ಮುನಿಯ || (೭೩೧)

(ಬಾಂಧವರ್+ಅನಾದಿಯಿಂ)(ನಿನ್ನ+ಎಡಬಲಂಗಳಲಿ)(ನಡೆವ+ಅವರುಂ)(ಸಂಧಿ+ಹೊಂದು+ಇಹರು)(ಹಿಂದು+ಇಂದುಗಳ)

ನಿನ್ನ ತಂದೆ, ತಾಯಿ ಮತ್ತು ಇತರ ಬಂಧುಗಳು ಪುರಾತನ ಕಾಲದಿಂದ ಬಂದವರು ಮತ್ತು ಇಂದಿಗೂ ಅವರುಗಳು ನಿನ್ನ ಜೊತೆಯಲ್ಲಿ ನಡೆಯುತ್ತಿದ್ದಾರೆ. ನಿನ್ನೊಳಗಡೆ ಅವರು ಗೂಢವಾಗಿ ಸೇರಿಕೊಂಡಿದ್ದಾರೆ. ನಿಜವಾಗಿ ನೋಡಿದರೆ, ನೀನು ಪುರಾತನ ಮತ್ತು ವರ್ತಮಾನದ ಶಿಶು(ಕೂಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You father, mother and relations have come to you from the primordial past,
Everyone who walks with you on your left and right
Have joined you in yourself and you are really mysterious
You are child of past and present – Marula Muniya (731)
(Translation from "Thus Sang Marula Muniya" by Sri. Narasimha Bhat)