Thursday, December 18, 2014

ವಿಶದನುಂ ಲೀನನುಂ ನೀನಾಗು ಲೋಕದಲಿ (708)

ವಿಶದನುಂ ಲೀನನುಂ ನೀನಾಗು ಲೋಕದಲಿ |
ಕುಶಲಗುಣದಿಂ ವಿಶದಮೌನದಿಂ ಲೀನ ||
ಹೆಸರಿಗೈಸಿರಿಗಾದ ಘಾಸಿಬೆಮರಿಂ ಲೋಕ- |
ದುಸಿರ ನೀಂ ಕೆಡಿಸದಿರು - ಮರುಳ ಮುನಿಯ || (೭೦೮)

(ಹೆಸರಿಗೆ+ಐಸಿರಿಗೆ+ಆದ)(ಲೋಕದ+ಉಸಿರ)(ಕೆಡಿಸದೆ+ಇರು)

ಈ ಜಗತ್ತಿನಲ್ಲಿ ಸ್ಪಷ್ಟ(ವಿಶದ)ವಾಗಿ ಕಾಣಿಸಿಕೊಳ್ಳುವವನೂ ಮತ್ತು ಕಣ್ಣುಗಳಿಗೆ ಕಾಣಿಸಿಕೊಳ್ಳದೆ ಅಡಗಿಕೊಂಡಿರುವವನೂ (ಲೀನ) ಆಗು. ಚತುರತೆಯಿಂದ ಕೂಡಿದ ಸ್ವಭಾವಗಳಿಂದ ನೀನು ಸ್ಪಷ್ಟವಾಗಿ ಕಾಣಿಸಿಕೊಳ್ಳಬಲ್ಲೆ. ಮಾತನಾಡದೆ ಮೌನದಿಂದದಿರುವುದರಿಂದ ಇತರರ ಕಣ್ಣುಗಳಿಗೆ ನೀನು ಕಾಣಿಸಿಕೊಳ್ಳದೆ ಅಡಗಿರಬಲ್ಲೆ. ಬಿರುದು ಮತ್ತು ಹೆಸರುಗಳನ್ನೂ ಮತ್ತು ಸಿರಿ, ಸಂಪತ್ತು(ಐಸಿರಿ)ಗಳನ್ನೂ ಗಳಿಸಲು ಆಯಾಸದಿಂದ ಸುರಿಸಿದ (ಘಾಸಿ)ಬೆವರಿನಿಂದ ಜಗತ್ತಿನ ವಾತಾವರಣವನ್ನು ನೀನು ಹಾಳುಮಾಡಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be conspicuous in the world with your excellent virtues
And be inconspicuous by merging silently in the world.
Pollute not the breath of humanity with your stinking sweat
Caused in your struggle for fame and wealth – Marula Muniya (708)
(Translation from "Thus Sang Marula Muniya" by Sri. Narasimha Bhat) 

No comments:

Post a Comment