Friday, November 29, 2013

ಪತಿ ಮನೆಯು ತನದೆಂದು ಸತಿ ಸಿರಿಯು ತನದೆಂದು (538)

ಪತಿ ಮನೆಯು ತನದೆಂದು ಸತಿ ಸಿರಿಯು ತನದೆಂದು |
ಪ್ರತಿಪಕ್ಷಗಳ ಹೂಡೆ ದಾಂಪತ್ಯಸುಖವೇಂ? ||
ದ್ವಿತಯ ಭಾವವ ಮೀರ‍್ದ ಜೀವನೈಕ್ಯದಿನಲ್ತೆ |
ಹಿತವಹುದು ಸಂಸಾರ - ಮರುಳ ಮುನಿಯ || (೫೩೮)

(ಜೀವನ+ಐಕ್ಯದಿನ್+ಅಲ್ತೆ)

ಪತಿಯು ಮನೆ ನನಗೆ ಸೇರಿದ್ದು ಎಂದೂ, ಪತ್ನಿಯು ಸಿರಿಸಂಪತ್ತುಗಳು ನನಗೆ ಸೇರಿದ್ದು ಎಂದೂ, ವಾದ ಪ್ರತಿವಾದಗಳನ್ನು ಹೂಡಿದರೆ, ದಾಂಪತ್ಯದಲ್ಲಿ ಸುಖವೇನಾದರೂ ಇರುತ್ತದೇನು? ಈ ರೀತಿಯ ಭಿನ್ನ ಭಿನ್ನ ಭಾವನೆಗಳನ್ನು ಮೀರಿದ ಒಂದುಗೂಡಿದ ಭಾವನೆಯ ಜೀವನದಿಂದ ಮಾತ್ರ ಸಂಸಾರವು ಹಿತಕರವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“This house is mine” says the husband; “this wealth is mine” asserts the wife
Where is conjugal happiness in such a life if they argue without end>
Family life blossoms with happiness in the unity of lives
That overcomes the sense of duality – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 28, 2013

ಬಿಡಿ ಬಿಡಿಯ ಬಾಳೇನು ಗಿಡದಿ ಬಿದ್ದಿಹ ಕುಡಿಯು (537)

ಬಿಡಿ ಬಿಡಿಯ ಬಾಳೇನು ಗಿಡದಿ ಬಿದ್ದಿಹ ಕುಡಿಯು |
ಬೆಡಗಿಲ್ಲ ಬೆಳೆಯಿಲ್ಲ ಬಾಡುತಿಹ ಬಾಳು ||
ಸಡಗರಿಪ ತಳಿರ ನಡುವೆಸೊಗಸಿನಲಿ ಪಾಲುಂಟು |
ಬಡವಲ್ಲ ಕೂಡಬಾಳ್ - ಮರುಳ ಮುನಿಯ || (೫೩೭)

ಒಂಟಿ ಒಂಟಿಯಾಗಿ ನಡೆಸುವ ಜೀವನ, ಒಂದು ಗಿಡದಿಂದ ಕೆಳಕ್ಕೆ ಬಿದ್ದಿರುವ ಚಿಗುರಿ(ಕುಡಿ)ನಂತೆ ಇರುತ್ತದೆ. ಸೊಗಸು, ವಿಲಾಸ ಮತ್ತು ವೃದ್ಧಿಗಳಿಲ್ಲದೆ ಸೊರಗುತ್ತಿರುವ ಜೀವನವದು. ಸಂಭ್ರಮದಿಂದ ಮತ್ತು ಉತ್ಸಾಹದಿಂದಿರುವ ಚಿಗುರು(ತಳಿರ)ಗಳ ಮಧ್ಯದಲ್ಲಿ ಚೆಲುವಿನ ಭಾಗವಿದೆ. ಕೂಡಿ ಸೇರಿ ನಡೆಸುವ ಜೀವನ ಬಡವಾಗುವುದಿಲ್ಲ. ಅದು ಸಿರಿತನದಿಂದ ಕೂಡಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Isolated life is like a tender shoot fallen from the plant
It is a withering life with no attraction or growth
Sharing the life together in the midst of the exulting beauty of sprigs
Is not a life of poverty? – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 27, 2013

ಕ್ರಮದ ಗರ್ಭದೊಳತಿಕ್ರಮಕಿಣ್ವ ಸೃಷ್ಟಿಯಲಿ (536)

ಕ್ರಮದ ಗರ್ಭದೊಳತಿಕ್ರಮಕಿಣ್ವ ಸೃಷ್ಟಿಯಲಿ |
ಸುಮ ಮಧುವಿನಂತರದೊಳುನ್ಮಾದ ಬೀಜ ||
ಅಮರಾಂಶವೊಂದು ಮರ್ತ್ಯಾಕೃತಿಯ ಗಹ್ವರದಿ |
ರಮಣೀಯವಿಂತು ಜಗ - ಮರುಳ ಮುನಿಯ || (೫೩೬)

(ಗರ್ಭದೊಳ್+ಅತಿಕ್ರಮಕಿಣ್ವ)(ಮಧುವಿನ+ಅಂತರದೊಳು+ಉನ್ಮಾದ)(ಅಮರ+ಅಂಶ)(ಮರ್ತ್ಯ+ಆಕೃತಿಯ)(ರಮಣೀಯ+ಇಂತು)

ಈ ನಿಯಮಗಳ ಗರ್ಭದಲ್ಲಿ ನಿಯಮಗಳನ್ನು ಮೀರಿದ ಹುದುಗು(ಮದ್ಯವನ್ನು ತಯಾರಿಸಲು ಉಪಯೋಗಿಸುವ ಮಷ್ಟು)ಗಳಿವೆ. ಹೂವು(ಸುಮ) ಮತ್ತು ಜೇನು(ಮಧು)ಗಳ ಮಧ್ಯದಲ್ಲಿ ಹುಚ್ಚು ಬರಿಸುವ ಬೀಜಗಳಿವೆ. ಮೃತಿ ಹೊಂದುವ (ಮರ್ತ್ಯಾಕೃತಿಯ) ಮನುಷ್ಯನ ಶರೀರವೆಂಬ ಗುಹೆ(ಗಹ್ವರ)ಯಲ್ಲಿ, ಅಮೃತದ(ಅಮರ) ಭಾಗಗಳಿವೆ. ಪ್ರಪಂಚವು ಈ ಕಾರಣದಿಂದ ಸುಂದರ ಮತ್ತು ಮನೋಹರವಾಗಿ ಕಾಣುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The seed of lawlessness lies in the womb of creation
The seed of intoxication is between the flower and its nectar
An immortal embryo in the cave of mortal human body
This world this is quite enchanting – Marula Muniya (536)
(Translation from "Thus Sang Marula Muniya" by Sri. Narasimha Bhat)

Tuesday, November 26, 2013

ನಿಯಮಂಗಳೆನಿತೆನಿತೊ ಸೃಷ್ಟಿಚರ್ಯೆಯೊಳಿಹುವು (535)

ನಿಯಮಂಗಳೆನಿತೆನಿತೊ ಸೃಷ್ಟಿಚರ್ಯೆಯೊಳಿಹುವು |
ಆಯಮಂಗಳುಂ ನಿಯಮಗಳ ಮೀರ‍್ದುವಂತು ||
ಸ್ವಯಮುತ್ಥ ನಿಯಮಾಯಮಪ್ರಚಯವೀಜಗವು |
ಸ್ಮಯಕಾರಿಯದರಿಂದೆ - ಮರುಳ ಮುನಿಯ || (೫೩೫)

(ನಿಯಮಂಗಳ್+ಎನಿತು+ಎನಿತೊ)(ಚರ್ಯೆಯೊಳ್+ಇಹುವು)(ಮೀರ‍್ದುವು+ಅಂತು)(ಸ್ವಯಂ+ಉತ್ಥ)(ನಿಯಮ+ಆಯಮ+ಪ್ರಚಯ+ಈ+ಜಗವು)(ಸ್ಮಯಕಾರಿ+ಅದರಿಂದೆ)

ಸೃಷ್ಟಿಯ ವರ್ತನೆಗಳಲ್ಲಿ ಬೇಕಾದಷ್ಟು ನಿಯಮಗಳಿವೆ. ಇವುಗಳಲ್ಲಿ ಹತೋಟಿಗೆ ಸಿಗಲಾರದವು (ಅಯಮ) ನಿಯಮಗಳನ್ನು ಮೀರಿ ಇವೆ. ತಾನಾಗಿ ತಾನೇ ಉದ್ಭವಿಸಿದ (ಸ್ವಯಮುತ್ಥ) ಕಟ್ಟಲೆಗೊಳಗಾದ ಮತ್ತು ಹತೋಟಿಗಳನ್ನು ಮೀರಿದ ಸಮೂಹ(ಪ್ರಚಯ)ಗಳಿಂದ ಕೂಡಿದ ಪ್ರಪಂಚವಿದು. ಆದಕಾರಣ ಈ ಜಗತ್ತು ಆಶ್ಚರ್ಯಕರವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Rules governing the functioning of Nature are numerous
Equally numerous are the transgressions of such rules
This world is spontaneous combination of such rules and their violations
This world therefore is a wonder of wonders – Marula Muniya
(Translation from "Thus Sang Marula Muniya" by Sri. Narasimha Bhat)

Monday, November 25, 2013

ಸೌಂದರ್ಯಮೂಲವೇಂ ದೃಷ್ಟವಸ್ತುವಿನೊಳಗೊ (534)

ಸೌಂದರ್ಯಮೂಲವೇಂ ದೃಷ್ಟವಸ್ತುವಿನೊಳಗೊ |
ಸಂದರ್ಶಕೇಂದ್ರಿಯದ ರುಚಿಶಕ್ತಿಯೊಳಗೋ ||
ಸಂಧಿಯೋ ದೃಷ್ಟದರ್ಶಕರುಭಯಗುಣದೊಳದು |
ಸಂಧಾನಬಿಂದುವಲ - ಮರುಳ ಮುನಿಯ || (೫೩೪)

(ವಸ್ತುವಿನ+ಒಳಗೊ)(ಶಕ್ತಿ+ಒಳಗೋ)(ಸಂದರ್ಶಕ+ಇಂದ್ರಿಯದ)(ದರ್ಶಕರ+ಉಭಯಗುಣದೊಳ್+ಅದು)

ಸೌಂದರ್ಯದ ಮೂಲ ನಾವು ನೋಡುತ್ತಿರುವ ವಸ್ತುವಿನೊಳಗಡೆ ಇದೆಯೋ? ಅಥವಾ ಅದು ನೋಡುತ್ತಿರುವವ ಇಂದ್ರಿಯಗಳ ರುಚಿ ಮತ್ತು ಶಕ್ತಿಯಲ್ಲಿ ಅಡಗಿದೆಯೋ? ಅಥವಾ ಇವೆರಡರ ಸಂಯೋಗವೋ? ಅದು ಕಾಣದ ವಸ್ತು ಮತ್ತು ನೋಡುವವರು ಇವೆರಡರಲ್ಲಿ ಇರುವ ಗುಣಗಳನ್ನು ಸೇರಿಸುವ ಸೇತುವೆ ಸ್ಥಾನವಾಗಿದೆ ಅಲ್ಲವೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Does the source of the beauty lie in the thing that is seen?
Is it in the aesthetic ability of the beholder’s eye?
Is it in the coordination of the qualities of the seen and seer?
Is it not the point of agreement between the two? – Marula Muniya
(Translation from "Thus Sang Marula Muniya" by Sri. Narasimha Bhat)

Friday, November 22, 2013

ಸೂರ್ಯಚಂದ್ರಕ್ಷೋಣಿ ತಾರಕಾಗೋಲಗಳು (533)

ಸೂರ್ಯಚಂದ್ರಕ್ಷೋಣಿ ತಾರಕಾಗೋಲಗಳು |
ಪರ್ಯಯಣದಿಂ ಸವೆದು ಸಡಿಲಲದರಿಂದೇಂ? ||
ಪರ್ಯಾಪ್ತವಾಗಿಪಳು ಜಗದಿ ಸತ್ತ್ವವ ಪ್ರಕೃತಿ |
ಮರ್ಯಾದೆ ಬೇರೆನಿಸಿ - ಮರುಳ ಮುನಿಯ || (೫೩೩)

(ಸಡಿಲಲ್+ಅದರಿಂದ+ಏಂ)(ಪರ್ಯಾಪ್ತ+ಆಗಿಪಳು)(ಬೇರೆ+ಎನಿಸಿ)

ಸೂರ್ಯ, ಚಂದ್ರ, ಭೂಮಿ (ಕ್ಷೋಣಿ) ಮತ್ತು ನಕ್ಷತ್ರ (ತಾರಕ) ಗೋಲಗಳು, ಅವುಗಳ ಸುತ್ತುವಿಕೆ(ಪರ್ಯಾಯಣ)ಯಿಂದ ಕ್ಷಯಿಸಿ ಶಿಥಿಲವಾಗುವುದಿಲ್ಲವೇನು? ಪ್ರಕೃತಿಯು ಜಗತ್ತಿನಲ್ಲಿರುವ ಸಾರವನ್ನು ಅದರ ವರ್ತನೆಯೇ ಬೇರೆ ಎಂದು ಎನ್ನಿಸುವಂತೆ ಸಾಮರ್ಥ್ಯಗೊಳಿಸುತ್ತಾಳೆ(ಪರ್ಯಾಪ್ತ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sun, the earth, stars and planets
May wear out and loosen due to ceaseless rotation
But nature, reimburses the spent energy
By some means or other – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 21, 2013

ಎರಡನಂತಗಳಿಹುವು ಹಿಂದೊಂದು ಮುಂದೊಂದು (532)

ಎರಡನಂತಗಳಿಹುವು ಹಿಂದೊಂದು ಮುಂದೊಂದು |
ಎರಡಮೇಯಗಳು ಮೇಲೊಂದು ಕೆಳಗೊಂದು ||
ಪರಿಧಿಯಿಲ್ಲದನಂತ ವಿಸ್ತರದ ನಡುವ ಜಗ |
ನೊರೆಯಂತೆ ಹಾಲಿನಲಿ - ಮರುಳ ಮುನಿಯ || (೫೩೨)

(ಎರಡು+ಅನಂತಗಳು+ಇಹುವು)(ಎರಡು+ಅಮೇಯಗಳು)(ಪರಿಧಿಯಿಲ್ಲದ+ಅನಂತ)

ಕೊನೆಯಿಲ್ಲದಿರುವ ಎರಡು ವಸ್ತುಗಳಿವೆ. ಹಿಂದೆ ಒಂದು ಮತ್ತು ಮುಂದೆ ಒಂದು. ಅದೇ ರೀತಿ ನಾವು ಅಳೆಯಲಿಕ್ಕೆ ಅಸಾಧ್ಯವಾದ ವಸ್ತುಗಳು ಎರಡಿವೆ. ಒಂದು ಮೇಲೆ ಮತ್ತು ಇನ್ನೊಂದು ಕೆಳಗೆ ಇವೆ. ಗಡಿ, ಸೀಮೆ ಮತ್ತು ಕೊನೆಯಿಲ್ಲದ ವಿಸ್ತಾರದ ಮಧ್ಯೆ ಈ ಜಗತ್ತು ಹಾಲಿನಲ್ಲಿರುವ ನೊರೆಯಂತಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two infinities there are, one in the past and the other in future
Two unknowable’s there are, one above and the other below
The world floats in the circumferenceless infinite expanse
Like foam in fresh milk – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 20, 2013

ರೂಪ್ಯಕದ ನಾಣ್ಯದಿಂ ಬಿಡಿಕಾಸಿಗೊಂದು ಬೆಲೆ (531)

ರೂಪ್ಯಕದ ನಾಣ್ಯದಿಂ ಬಿಡಿಕಾಸಿಗೊಂದು ಬೆಲೆ |
ಒಪ್ಪಹುದು ಕಾಸಬೆಲೆ ರೂಪ್ಯದಿಂದೆ ||
ಪ್ರಾಪ್ಯರಿಂತನ್ಯೋನ್ಯ ಜನದೊಟ್ಟು ಬಿಡಿಮಂದಿ |
ಸುಪ್ರೀತ ರಾಜ್ಯವದು - ಮರುಳ ಮುನಿಯ || (೫೩೧)

(ಬಿಡಿಕಾಸಿಗೆ+ಒಂದು)(ಒಪ್ಪು+ಅಹುದು)(ಪ್ರಾಪ್ಯರು+ಇಂತು+ಅನ್ಯೋನ್ಯ)(ಜನದ+ಒಟ್ಟು)

ಒಂದು ರೂಪಾಯಿಯ (ರೂಪ್ಯಕ) ನಾಣ್ಯದಿಂದ ಬಿಡಿಕಾಸಿಗೂ ಬೆಲೆ ಬರುತ್ತದೆ ಮತ್ತು ರೂಪಾಯಿಯಿಂದ ಕಾಸಿನ ಬೆಲೆಯನ್ನು ಅಂಗೀಕರಿಸಬಹುದು. ಇದೇ ರೀತಿ ಜನರಸಮೂಹ ಮತ್ತು ಬಿಡಿವ್ಯಕ್ತಿ ಪರಸ್ಪರ ಒಬ್ಬರೊಬ್ಬರಿಗೆ ಒಪ್ಪುವಂಥ ರಾಜ್ಯವಾಗಿರುತ್ತೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Value to a single smallest coin due to the value of the silver rupee
Even the smallest coin is honoured because of its silver
Likewise the individuals benefit the society and the society benefits the individuals
Such a country is really happy – Marula Muniya
(Translation from "Thus Sang Marula Muniya" by Sri. Narasimha Bhat) #dvg,#kagga

Tuesday, November 19, 2013

ಜನನೀತಿಯೇನತಂತ್ರದ ಮಾರ್ಗವೆನ್ನದಿರು (530)

ಜನನೀತಿಯೇನತಂತ್ರದ ಮಾರ್ಗವೆನ್ನದಿರು |
ಕನಸದನುಮಲೆಗೆಳೆಯೆ ನೆನಸು ಕುಳಿಗೆಳೆಗುಂ ||
ಅನುಸರಿಪುದಿಕ್ಕಟ್ಟಿನಲಿ ಮಧ್ಯಗತಿಯನದು |
ಕನಿಕರಿಸು ಲೋಕದಲಿ - ಮರುಳ ಮುನಿಯ || (೫೩೦)

(ಜನನೀತಿ+ಏನು+ಅತಂತ್ರದ)(ಮಾರ್ಗ+ಎನ್ನದೆ+ಇರು)(ಕನಸು+ಅದನು+ಮಲೆಗೆಳೆಯೆ)(ಕುಳಿಗೆ+ಎಳೆಗುಂ)(ಅನುಸರಿಪುದು+ಇಕ್ಕಟ್ಟಿನಲಿ)(ಮಧ್ಯಗತಿಯನ್+ಅದು)

ಲೋಕವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಮಾಡಿರುವ ನ್ಯಾಯ ಮತ್ತು ಧರ್ಮಗಳ ನಿಯಮಗಳೆಲ್ಲವೂ, ಅನಿರ್ಭಂದಿತವಾದ, ಹೇಳುವವರೂ ಕೇಳುವವರೂ ಮತ್ತು ಮೇಲ್ವಿಚಾರಕರಿರದಿರುವ ದಾರಿಗಳೆಂದೆನ್ನಬೇಡ. ಕನಸು ಅವುಗಳನ್ನು ಬೆಟ್ಟದ ಶಿಖರಕ್ಕೆ ತೆಗೆದುಕೊಂಡು ಹೋದರೆ, ವಾಸ್ತವಿಕತೆಯು ಅವುಗಳನ್ನು ಗುಣಿಗೆ ಎಳೆದುಕೊಂಡು ಹೋಗುತ್ತದೆ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅದು ಇವೆರಡೂ ಅಲ್ಲದ ಒಂದು ನಡುಮಾರ್ಗವನ್ನು ಅನುಸರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ನೀನು ಲೋಕದಲ್ಲಿ ಕನಿಕರವನ್ನು ತೋರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“The conduct of people is through a thoughtless path”, say not so
Their dreams pull them to the hills and the realities push them to the ditch
With utmost difficulty people stick to the middle path
Have compassion on the world – Marula Muniya
(Translation from "Thus Sang Marula Muniya" by Sri. Narasimha Bhat)

Monday, November 18, 2013

ಅನಿತಿನಿತು ಶಾಸ್ತ್ರಂಗಳನಿತಿನಿತು ನಿಜಯುಕ್ತಿ (529)

ಅನಿತಿನಿತು ಶಾಸ್ತ್ರಂಗಳನಿತಿನಿತು ನಿಜಯುಕ್ತಿ |
ಇನ ಶಶಿ ಪ್ರಭೆಯಿನಿತು ನೆಲದ ಹಬೆಯಿನಿತು ||
ದಿನದಿನದ ಗತಿಯಿನಿತನಂತದ ಸ್ಮೃತಿಯಿನಿತು |
ಅನುಗೂಡೆ ಬೆಳಕಿಳೆಗೆ - ಮರುಳ ಮುನಿಯ || (೫೨೯)

(ಅನಿತು+ಇನಿತು)(ಶಾಸ್ತ್ರಂಗಳ+ಅನಿತು+ಇನಿತು)(ಗತಿಯಿನಿತು+ಅನಂತದ)(ಬೆಳಕು+ಇಳೆಗೆ)

ಸ್ವಲ್ಪ ಮಟ್ಟಿಗೆ ಗ್ರಂಥಗಳಿಂದ ಸಂಪಾದಿಸಿದ ಜ್ಞಾನ, ಸ್ವಲ್ಪಮಟ್ಟಿಗೆ ತನ್ನ ಸ್ವಂತ ಸಮಯೋಚಿತ ಜ್ಞಾನ, ಸ್ವಲ್ಪಮಟ್ಟಿಗೆ ಸೂರ್ಯ(ಇನ) ಮತ್ತು ಚಂದ್ರ(ಶಶಿ)ರುಗಳು ನೀಡಿದ ಬೆಳಕು ಮತ್ತು ಕಾಂತಿ, ಸ್ವಲ್ಪಮಟ್ಟಿಗೆ ಭೂಮಿಯ ಹಬೆ, ಪ್ರತಿನಿತ್ಯದ ಚಲನೆ ಮತ್ತು ಮುಂದುವರಿಯುವಿಕೆ, ಅನಂತವಾಗಿರುವ ಧರ್ಮ ಮತ್ತು ವೇದಗ್ರಂಥಗಳ ನೆನಪು, ಇವುಗಳೆಲ್ಲವೂ ಹೊಂದಿಕೊಂಡು ಸೇರಿದರೆ ಭೂಮಿ(ಇಳೆ)ಗೆ ಬೆಳಕು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In some measure from scriptures, in some measure from one’s own wisdom
With some light from the sun and moon, some steam from the earth
Some measure of daily forward movement and some remembrance of the Infinite
All these mingle together and light up the world – Marula Muniya
(Translation from "Thus Sang Marula Muniya" by Sri. Narasimha Bhat)

Friday, November 15, 2013

ತನ್ನ ತಾನರಿತವನು ಅನ್ಯನಾಗದೆ ನಿಂತು (528)

ತನ್ನ ತಾನರಿತವನು ಅನ್ಯನಾಗದೆ ನಿಂತು |
ತನ್ನತನದಿಂದನ್ಯರಿಂಗುಪಕರಿಪ್ಪಂ ||
ತನ್ನತಾನದು ಮುಕ್ತ ಭಿನ್ನನಾಗದವನು |
ಮಾನ್ಯನುರ್ವಿಗೆ ಧನ್ಯ - ಮರುಳ ಮುನಿಯ || (೫೨೮)

(ತಾನ್+ಅರಿತವನು)(ಅನ್ಯನ್+ಆಗದೆ)(ತನ್ನತನದಿಂದ+ಅನ್ಯರಿಂಗೆ+ಉಪಕರಿಪ್ಪಂ)(ತನ್ನ+ತಾನ್+ಅದು)(ಭಿನ್ನನ್+ಆಗದವನು)(ಮಾನ್ಯನ್+ಉರ್ವಿಗೆ)

ತನ್ನನ್ನು ತಾನೇ ಚೆನ್ನಾಗಿ ತಿಳಿದುಕೊಂಡವನು, ಬೇರೆಯವನಾಗದೆ ನಿಂತುಕೊಂಡು, ತನ್ನದೇ ಆದ ವ್ಯಕ್ತಿತ್ವದಿಂದ ಇತರರಿಗೆ ಸಹಾಯವನ್ನು ಮಾಡುತ್ತಾನೆ. ತನ್ನಿಂದ ತಾನೇ ಬಿಡುಗಡೆ ಹೊಂದಿದವನು ಮತ್ತು ಒಡೆದು ಬೇರೆಯಾಗದವನು, ಪ್ರಪಂಚ(ಉರ್ವಿ)ದಿಂದ ಗೌರವಿಸಲ್ಪಡುವ ವ್ಯಕ್ತಿ ಮತ್ತು ಪುಣ್ಯಶಾಲಿಯಾಗುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who has realized his self becomes one with others
And helps others with all his self
The one whose self id free and one with all the world
Has fulfilled his life mission and is honoured by the world – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 14, 2013

ಕೊಡಬೇಕು ಕೊಡಬೇಕು ಕೊಡಬೇಕು ನಲುಮೆಯಲಿ (527)

ಕೊಡಬೇಕು ಕೊಡಬೇಕು ಕೊಡಬೇಕು ನಲುಮೆಯಲಿ |
ಮೃಡನಿತ್ತನಿತ ಮುಡಿಪವಂಗೆಂದು ನಿನ್ನಾ ||
ಕೊಡುಗೆಗಳು ಪರಮೇಶನೊಡಲ ಮೂಳೆಗಳಾಗಿ |
ಪೊಡವಿಯನು ಧರಿಸುವುವೊ - ಮರುಳ ಮುನಿಯ || (೫೨೭)

(ಮೃಡನು+ಇತ್ತ+ಅನಿತ)(ಮುಡಿಪು+ಅವಂಗೆ+ಎಂದು)(ಪರಮೇಶನ+ಒಡಲ)(ಮೂಳೆಗಳು+ಆಗಿ)

ಈಶ್ವರ(ಮೃಡ)ನು ನಿನಗೆ ಕೊಟ್ಟಿರುವ ಸಂಪತ್ತನ್ನು ಸ್ವಲ್ಪಮಟ್ಟಿಗೆ ಮೀಸಲಾಗಿಟ್ಟು (ಮುಡಿಪು) ಅವುಗಳನ್ನು ಪ್ರೀತಿಯಿಂದ ಇತರರಿಗೆ ಕೊಡು. ನೀನು ಈ ರೀತಿಯಾಗಿ ಕೊಟ್ಟ ಕೊಡುಗೆಗಳು ಈಶ್ವರನ ದೇಹದ (ಒಡಲ) ಅಸ್ಥಿಗಳಾಗಿ ಭೂಮಿ(ಪೊಡಮಿ)ಯನ್ನು ತೊಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Give, give and give with all love and affection
Give all that God has given as the token of your dedication
Let your offerings become the very bones of God’s own body
And support this world – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 13, 2013

ತನುವಿನಂಗೀಕಾರ ದಾಂಪತ್ಯದರ್ಧಗುಣ (526)

ತನುವಿನಂಗೀಕಾರ ದಾಂಪತ್ಯದರ್ಧಗುಣ |
ಮನಸಿನಂಗೀಕಾರವಿನ್ನರ್ಧವವರೊಳ್ ||
ಜನುಮದುದ್ಧಾರವಿರ‍್ವರಿಗಮನ್ಯೋನ್ಯ ಬಲ |
ವಿನಿಮಯ ಸಹಾಯದಿಂ - ಮರುಳ ಮುನಿಯ || (೫೨೬)

(ತನುವಿನ+ಅಂಗೀಕಾರ)(ದಾಂಪತ್ಯದ+ಅರ್ಧಗುಣ)(ಮನಸಿನ+ಅಂಗೀಕಾರ)(ಇನ್ನರ್ಧ+ಅವರೊಳ್)(ಜನುಮದ+ಉದ್ಧಾರ+ಇರ‍್ವರಿಗಂ+ಅನ್ಯೋನ್ಯ)

ಒಬ್ಬರೊಬ್ಬರ ದೇಹ ಸೌಂದರ್ಯವನ್ನು ಒಪ್ಪಿಕೊಳ್ಳುವುದು ದಾಂಪತ್ಯ ಜೀವನದ ಅರ್ಧ ಲಕ್ಷಣ. ಒಬ್ಬರೊಬ್ಬರು ಅರ್ಥ ಮಾಡಿಕೊಂಡು ಜೀವನವನ್ನು ನಡೆಸುವುದು ಇನ್ನರ್ಧ ಲಕ್ಷಣ. ಈ ರೀತಿಯ ಪರಸ್ಪರ ಶಕ್ತಿಗಳನ್ನು ಕೊಟ್ಟು, ತೆಗೆದುಕೊಳ್ಳುವಿಕೆಯ (ವಿನಿಮಯ) ಸಹಾಯದಿಂದ ದಂಪತಿಗಳಿಬ್ಬರ ಜನ್ಮಗಳೂ ಉದ್ಧಾರವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Each of the married couple ought to accept the body of the other as his or her own
This would bless them with half the benefit of married life
Accepting the mind also like this would bless them with the other half
This is the path for the fulfilment of their loves, each one
Should derive strength through mutual exchange and support- Marula Muniya
(Translation from "Thus Sang Marula Muniya" by Sri. Narasimha Bhat)

Tuesday, November 12, 2013

ಪುರುಷಸಾಧ್ಯ ವಿವೇಕ ಸಿದ್ಧಿ ನಿರ್ಮಮತೆಯಿನೆ (525)

ಪುರುಷಸಾಧ್ಯ ವಿವೇಕ ಸಿದ್ಧಿ ನಿರ್ಮಮತೆಯಿನೆ |
ಪರಿಗೂಢ ಧರ್ಮಬೀಜದ ವಿಕಾಸದಿನೆ ||
ಚಿರ ಸಮಾಧಾನ ಕಲ್ಯಾಣ ಲೋಕಕ್ಕದನು |
ಪೊರೆವನೆ ಜನೋದ್ಧಾರಿ - ಮರುಳ ಮುನಿಯ ||

(ಲೋಕಕ್ಕೆ+ಅದನು)(ಜನ+ಉದ್ಧಾರಿ)

ಅಹಂಕಾರ, ಸ್ವಾರ್ಥ ಮತ್ತು ಮೋಹಗಳನ್ನು ತೊರೆಯುವುದರಿಂದ (ನಿರ್ಮಮತೆಯಿಂದ) ಮನುಷ್ಯನು ಯುಕ್ತಾಯುಕ್ತಾ ವಿವೇಚನೆಯ ಪರಿಜ್ಞಾನವನ್ನು ಹೊಂದಲು ಸಾಧ್ಯ. ಅತ್ಯಂತ ರಹಸ್ಯ(ಪರಿಗೂಢ)ವಾಗಿರುವ ಧರ್ಮದ ಬೀಜದ ಅರಳುವಿಕೆ(ವಿಕಾಸ)ಯಿಂದ ಶಾಶ್ವತವಾದ ನೆಮ್ಮದಿ ಮತ್ತು ಮಂಗಳಕರವಾದುದು ದೊರಕುತ್ತದೆ. ಇದನ್ನು ಕಾಪಾಡುವವನೇ ಜನಗಳನ್ನು ಉದ್ಧಾರ ಮಾಡುವವನೆನ್ನಿಸಿಕೊಳ್ಳುತ್ತೇನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Everlasting peace and welfare of the world can be achieved through
The maximum possible human discrimination and dispassion
And the growth and development of the mysterious dharma
He who promotes the above is the saviour of the world – Marula Muniya
(Translation from "Thus Sang Marula Muniya" by Sri. Narasimha Bhat)

Monday, November 11, 2013

ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ (524)

ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ |
ಬೀಳಾಯ್ತು ನಿನ್ನೆಯದೆಂದಳುವುದೇಕೆ ? ||
ಮೇಲು ಮಾಡಲ್ಕಂದು ಸಮಯವದಕಾಣೆಯೇಂ |
ಪಾಳೊಂದುಮಿಲ್ಲವೆಲೊ - ಮರುಳ ಮುನಿಯ || (೫೨೪)

(ನಾಳೆ+ಒಂದು+ಇಹುದು)(ಬೀಳ್+ಆಯ್ತು)(ನಿನ್ನೆ+ಅದು+ಎಂದು+ಅಳುವುದು+ಏಕೆ)(ಮಾಡಲ್ಕೆ+ಎಂದು)(ಸಮಯವ+ಅದುಅ+ಕಾಣೆಯೇಂ)(ಪಾಳ್+ಒಂದುಂ+ಇಲ್ಲ+ಎಲೊ)

ಆಗಿಹೋದ ನಿನ್ನೆಯಂತೆ ಜೀವನದಲ್ಲಿ ನಾಳೆ ಎನ್ನುವುದೂ ಒಂದಿದೆ ಎನ್ನುವುದನ್ನು ಮರೆಯಬೇಡ. ನಿನ್ನೆಯ ದಿನ ಏನೂ ಕೆಲಸವಾಗದೆ ಹಾಳಾಯ್ತೆಂದು ಏತಕ್ಕಾಗಿ ಅಳುತ್ತಿರುವೆ. ಬೇಕಾಗಿರುವುದನ್ನು ಪುನಃ ಮೇಲಕ್ಕೆತ್ತಲು ಅದು ತಕ್ಕ ಸಮಯಕ್ಕೆ ಕಾಯುತ್ತಿರುವುದನ್ನು ನೀನು ಕಾಣುತ್ತಿಲ್ಲವೇನು? ಪ್ರಪಂಚದಲ್ಲಿ ಹಾಳು(ಪಾಳ್) ಎನ್ನುವುದು ಯಾವುದೂ ಇಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There’s a tomorrow in life just as there was a yesterday
Why do you grieve thinking that past yesterday became a waste?
Can’t you still find enough time to perform noble deeds?
Nothing is a waste – Marula Muniya
(Translation from "Thus Sang Marula Muniya" by Sri. Narasimha Bhat)

Friday, November 8, 2013

ದೇವನಿಂಗೆಂದು ದುಡಿ ಯಾವಾತನಿಗಮಲ್ತು (523)

ದೇವನಿಂಗೆಂದು ದುಡಿ ಯಾವಾತನಿಗಮಲ್ತು |
ಜೀವ ಶೋಧನೆಗೆ ದುಡಿ ಭೂವಿಭವಕಲ್ತು ||
ಈವನೆಲ್ಲರ್ಗಮೀಶಂ ತಕ್ಕುದವರವರ್ಗೆ |
ಆವರದಿ ತೃಪ್ತನಿರು - ಮರುಳ ಮುನಿಯ || (೫೨೩)

(ದೇವನಿಂಗೆ+ಎಂದು)(ಯಾವಾತನಿಗಂ+ಅಲ್ತು)(ಭೂವಿಭವಕೆ+ಅಲ್ತು)(ಈವನ್+ಎಲ್ಲರ್ಗಂ+ಈಶಂ)
(ತಕ್ಕುದು+ಅವರವರ್ಗೆ)(ತೃಪ್ತನ್+ಇರು)

ಪರಮಾತ್ಮನನ್ನು ಸಂತುಷ್ಟಪಡಿಸಲು ಕೆಲಸ ಮಾಡು, ಇನ್ನು ಬೇರೆ ಯಾರಿಗೋಸ್ಕರವಲ್ಲ. ಜೀವವನ್ನು ಸ್ವಚ್ಛಗೊಳಿಸಲು ಶ್ರಮಿಸು. ಭೂಮಿಯಲ್ಲಿ ನಿನಗೆ ದೊರಕುವ ವೈಭವ(ವಿಭವ)ಗಳಿಗಾಗಿ ಅಲ್ಲ. ಅವರವರಿಗೆ ಯೋಗ್ಯವಾಗಿ ದೊರಕಬೇಕಾದುದ್ದನ್ನು ಅವರವರಿಗೆ ಪರಮಾತ್ಮನು ನೀಡುತ್ತಾನೆ. ಈಶ್ವರನ ಆ ಅನುಗ್ರಹವನ್ನು ಸ್ವೀಕರಿಸಿ ತೃಪ್ತನಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Work for God and not for the sake of anyone else,
Work for the exploration of the soul and not for worldly wealth
God grants everybody what every one of them truly deserves
Be content with this boon – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 7, 2013

ಲೋಕೇಶನೇಂ ನಿರಂಕುಶನವನ ರಾಜ್ಯದಲಿ (522)

ಲೋಕೇಶನೇಂ ನಿರಂಕುಶನವನ ರಾಜ್ಯದಲಿ |
ಲೋಕಸಭೆಯೊಂದಿಲ್ಲ ದೂರಿಕೊಳೆ (ಕೊಳೆಯ) ||
ಸಾಕು ನಮಗೀ ಹಳೆಯ ಸೊಟ್ಟುಸೊಟ್ಟಿನ ಸೃಷ್ಟಿ |
ಬೇಕು ಪ್ರಜಾಸೃಷ್ಟಿ - ಮರುಳ ಮುನಿಯ || (೫೨೨)

(ಲೋಕ+ಈಶನು+ಏಂ)(ನಿರಂಕುಶನು+ಅವನ)(ಲೋಕಸಭೆ+ಒಂದು+ಇಲ್ಲ)

ಪರಮಾತ್ಮನು ತನ್ನ ರಾಜ್ಯದಲ್ಲಿ ಯಾವ ವಿಧವಾದ ಅಡ್ಡಿ ಆತಂಕಗಳೂ ಇಲ್ಲದೆ ರಾಜ್ಯಭಾರವನ್ನು ನಡೆಸುತ್ತಾನೋ? ಅವನ ವಿರುದ್ಧ ನಾವುಗಳು ಏನನ್ನಾದರೂ ದೂರು ಹೇಳಬೇಕಿದ್ದಲ್ಲಿ ನಮಗೆ ನಮ್ಮದೇ ಆದ ಯಾವ ಪ್ರಜಾ ಸಭೆಗಳೂ ಇಲ್ಲ. ನಮಗಂತೂ ಈ ಹಳೆಯ, ನೆಟ್ಟಗಿಲ್ಲದಿರುವ ಮತ್ತು ಕುಂದು ಕೊರತೆಗಳಿಂದ ಕೂಡಿದ ಸಹವಾಸ ಸಾಕಾಗಿದೆ. ನಮಗೆ ಈಗ ಬೇಕಿರುವುದು ನಾವುಗಳೇ ಸಡೆಸಲು ಸಾಧ್ಯವಾದಂತಹ ಒಂದು ಪ್ರಜಾಸೃಷ್ಟಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is the master of the universe an autocrat? In His Kingdom
There’s no parliament where we can give vent to our grievances
Enough, enough of this crooked, craggy world
We now long for a creation, for and by the people – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 6, 2013

ಸ್ವೈರಪ್ರಕೃತಿಯಿನಪ್ಪ ಮಮತಾ ಪ್ರಲೋಭನ (521)

ಸ್ವೈರಪ್ರಕೃತಿಯಿನಪ್ಪ ಮಮತಾ ಪ್ರಲೋಭನ |
ಪ್ರೇರಣೆಗಳಂ ನರಂ ಮೀರಿ ತನ್ನಾತ್ಮಂ ||
ಸಾರನಿಧಿ ಮಿಕ್ಕೆಲ್ಲ ಜಗದಿಮೆನ್ನುತೆ ಬಾಳ್ವ |
ವೈರಾಗ್ಯದಿನೆ ಶಾಂತಿ - ಮರುಳ ಮುನಿಯ || (೫೨೧)

(ಸ್ವೈರಪ್ರಕೃತಿಯಿನ್+ಅಪ್ಪ)(ತನ್ನ+ಆತ್ಮಂ)(ಜಗದಿಂ+ಎನ್ನುತೆ)

ಪ್ರಕೃತಿಯು ತನ್ನ ಸ್ವೇಚ್ಛ (ಸ್ವೈರ) ಭಾವದಿಂದ ಉಂಟುಮಾಡುವ ಮೋಹ, ಅಹಂಕಾರ ಮತ್ತು ಸ್ವಾರ್ಥಗಳ ಆಸೆಗಳನ್ನು ಹುಟ್ಟಿಸುವ ಪ್ರಚೋದನೆ(ಪ್ರೇರಣೆ)ಗಳನ್ನು ಮನುಷ್ಯನು ದಾಟಿಹೋಗಿ, ತನ್ನ ಆತ್ಮದಲ್ಲೇ ಸಂಪೂರ್ಣ ಸಂಪತ್ತು (ಸಾರನಿಧಿ) ಅಡಗಿದೆ, ಮಿಕ್ಕಿದ್ದುದೆಲ್ಲವೂ ಪ್ರಪಂಚಕ್ಕೆ ಸೇರಿದ್ದುದು ಎನ್ನುತ್ತ ಜೀವನವನ್ನು ನಡೆಸುವ ವಿರಕ್ತತೆಯಿಂದಲೇ ಮನುಷ್ಯನಿಗೆ ನೆಮ್ಮದಿಯು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Man must rise above myness and enticements arising from
The unbridled wayward life style and realize that
His own self is a treasure far more precious than all the rest of the world
Peace reigns in one who lives as above with dispassion – Marula Muniya
(Translation from "Thus Sang Marula Muniya" by Sri. Narasimha Bhat)

Tuesday, November 5, 2013

ಮಿತಿಯುಂಟು ಲೌಕಿಕದ ಕರ್ತವ್ಯಕೆಲ್ಲಕುಂ (520)

ಮಿತಿಯುಂಟು ಲೌಕಿಕದ ಕರ್ತವ್ಯಕೆಲ್ಲಕುಂ |
ಸತಿಸುತರ ದಾಯಕ್ಕೆ ದೇಶಕುಲಋಣಕೆ ||
ಅತಿಧನಾರ್ಜನೆಯತ್ನವಾತ್ಮವನೆ ಹಿಸುಕೀತು |
ಮಿತಿಯಿಂದ ಹಿತ ಲೋಕ - ಮರುಳ ಮುನಿಯ || (೫೨೦)

(ಮಿತಿ+ಉಂಟು)(ಕರ್ತವ್ಯಕೆ+ಎಲ್ಲಕುಂ)(ಅತಿಧನಾರ್ಜನಯತ್ನ+ಆತ್ಮವನೆ)

ನಾವು ಈ ಲೌಕಿಕ ಪ್ರಪಂಚದಲ್ಲಿ ಮಾಡಬೇಕಾದ ಕರ್ತವ್ಯಗಳೆಲ್ಲವಕ್ಕೂ, ಪತ್ನಿ ಮತ್ತು ಪುತ್ರರಿಗೆ ಕೊಡಬೇಕಾದ ಆಸ್ತಿ(ದಾಯ)ಗಳಿಗೂ, ದೇಶ ಮತ್ತು ಕುಲಕ್ಕೆ ಸಲ್ಲಿಸಬೇಕಾದ ಋಣಗಳಿಗೂ ಒಂದು ಮಿತಿ ಇದೆ. ಇದನ್ನು ಬಿಟ್ಟು ಅತಿಯಾಗಿ ಹಣವನ್ನು ಸಂಪಾದಿಸುವ ಪ್ರಯತ್ನವನ್ನು ಮಾಡಿದರೆ ಅದು ಆತ್ಮವನ್ನೇ ಹಿಸುಕಬಹುದು. ಮಿತಿಯಲ್ಲಿ ಕೆಲಸ ಮಾಡಿದರೆ ಲೋಕಕ್ಕೆ ಒಳ್ಳೆಯದಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Limits there are to all the worldly duties, limited are
The duties to wife and children, to community and country
Efforts to heap up excessive wealth may crush your soul
Welfare of the world lies only in moderate conduct – Marula Muniya
(Translation from "Thus Sang Marula Muniya" by Sri. Narasimha Bhat)