Wednesday, July 31, 2013

ಮಾಯೆ ಮಾಯೆಯಿದೆಂದು ಹಳಿದೊಡಾಗುವುದೇನು (476)

ಮಾಯೆ ಮಾಯೆಯಿದೆಂದು ಹಳಿದೊಡಾಗುವುದೇನು ? |
ಕಾಯವಿರುವನಕ ಸಂಸಾರಬಿಡದಿಹುದು ||
ಲಾಯದೊಳಗಿರುವಂದು ಬಯಲ ಮರೆಯದ ಕುದುರೆ- |
ಗಾಯಾಸ ಭಯ ಹಗುರ - ಮರುಳ ಮುನಿಯ || (೪೭೬)

(ಮಾಯೆಯು+ಇದು+ಎಂದು)(ಹಳಿದೊಡೆ+ಆಗುವುದು+ಏನು)(ಕಾಯ+ಇರುವನಕ)(ಸಂಸಾರಬಿಡದೆ+ಇಹುದು)(ಲಾಯದೊಳಗೆ+ಇರುವಂದು)(ಕುದುರೆಗೆ+ಆಯಾಸ)

ನಾನಿರುವುದು ಈ ಮಾಯಾಪ್ರಪಂಚದಲ್ಲಿ, ಆದರೆ ಬ್ರಹ್ಮನೇ ಸತ್ಯ ಮಿಕ್ಕಿದ್ದುದೆಲ್ಲ ಮಿಥ್ಯವೆಂದು ನಿಂದಿಸಿದರೇನು ಉಪಯೋಗ? ನಾವು ಈ ದೇಹವನ್ನು ಧರಿಸಿರುವತನಕ ಸಂಸಾರ ನಮಗೆ ಅಂಟಿದ್ದೇ. ಒಂದು ಕುದುರೆಯನ್ನು ಅದರ ಲಾಯದಲ್ಲಿ ಕಟ್ಟಿಹಾಕಿದಾಗ ಅದು ತಾನು ಬಯಲಲ್ಲಿ ಹಾಯಾಗಿರುವುದನ್ನು ಮರೆಯದಿದ್ದರೆ, ಅದಕ್ಕೆ ಕಷ್ಟ ಮತ್ತು ಹೆದರಿಕೆಗಳನ್ನು ಸಹಿಸಲು ಸಾಧ್ಯವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is no gain if you decry the world as Maya
The worldly bonds will never let you go as long as your body lasts,
Less intense will be the fear of weariness to the horse in the stable
If it continues to remember the open plains – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 30, 2013

ಯುವತಿ ನವ ಹಾವಭಾವಗಳಿಂದನುಕ್ಷಣಮ್ (475)

ಯುವತಿ ನವ ಹಾವಭಾವಗಳಿಂದನುಕ್ಷಣಮ್ |
ನವತೆಯಾನುತಿರೆ ಯುವಕಂ ಬೆರಗುಪಡುವವೊಲ್ ||
ವಿವಿಧವೇಷದಿ ನವ್ಯತೆಯನಾನುತಿರೆ ಮಾಯೆ |
ಶಿವನು ಸುಖತನ್ಮಯನೊ - ಮರುಳ ಮುನಿಯ || (೪೭೫)

(ಹಾವಭಾವಗಳಿಂದ+ಅನುಕ್ಷಣಮ್)(ನವತೆ+ಆನುತ+ಇರೆ)(ನವ್ಯತೆಯನ್+ಆನುತ+ಇರೆ)

ಒಬ್ಬ ಸುಂದರವಾದ ಯುವತಿ ತನ್ನ ಹೊಸ ಹೊಸ ಬೆಡಗು ಮತ್ತು ಬಿನ್ನಾಣಗಳಿಂದ, ಪ್ರತಿಕ್ಷಣವೂ ಹೊಸತನವನ್ನು ಹೊಂದುತ್ತಿರಲು, ಅದನ್ನು ನೋಡಿ ಆಶ್ಚರ್ಯ(ಬೆಡಗು)ಪಡುತ್ತಿರುವ ಯುವಕನಂತೆ, ವಿಧವಿಧವಾದ ಪಾತ್ರಗಳನ್ನು ಧರಿಸಿ ಮಾಯೆಯೂ ಸಹ ಹೊಸತನವನ್ನು ತಳೆಯುತ್ತಿರಲು, ಪರಮಾತ್ಮನು ಅದರಲ್ಲಿ ಸುಖ ಸಂತೋಷದಿಂದ ತಲ್ಲೀನನಾಗಿರುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When a young maiden appears new every moment with new graceful
Amorous airs and arts, a youth becomes fascinated and wonder-struck
Likewise when Maya appears new with new graceful guises every moment
Shiva becomes immersed in joy – Marula Muniya (475)
(Translation from "Thus Sang Marula Muniya" by Sri. Narasimha Bhat)

Monday, July 29, 2013

ಆರನುಂ ಬಿಡದ ಧರ್ಮಂ ಜಗದ್ರಥಸೇವೆ (474)

ಆರನುಂ ಬಿಡದ ಧರ್ಮಂ ಜಗದ್ರಥಸೇವೆ |
ಧೀರನೆಳೆವಂ ಬ್ರಹ್ಮಲೀಲೆಯೆಂದದನು ||
ತೇರು ನಿಜ ಭೋಗ್ಯ ಸಂಸಾರವೆಂಬ ಭ್ರಮೆಗೆ |
ಮಾರುವೋದಂ ಮೂಢ - ಮರುಳ ಮುನಿಯ || (೪೭೪)


(ಜಗತ್+ರಥಸೇವೆ)(ಧೀರನ್+ಎಳೆವಂ)(ಬ್ರಹ್ಮಲೀಲೆ+ಎಂದು+ಅದನು)(ಸಂಸಾರ+ಎಂಬ)

ಪ್ರಪಂಚವೆಂಬ ರಥದ ಸೇವೆಯನ್ನು ಮಾಡುವುದು ಯಾರನ್ನೂ ಬಿಡದಿರುವ ಕರ್ತವ್ಯ. ಶೂರನಾದವನು ಅದನ್ನು ಪರಬ್ರಹ್ಮನ ಕ್ರೀಡೆಯೆಂದು ಅರಿತು ಎಳೆಯುತ್ತಾನೆ. ತೇರು ತಾನು ಅನುಭವಿಸುವ ಸಂಸಾರ ಸುಖವೆಂಬ ತಪ್ಪುಗ್ರಹಿಕೆಗೆ ಮರುಳಾಗುವವನು(ಮಾರುವೋದಂ) ಒಬ್ಬ ಮೂರ್ಖನೇ ಸರಿ.
(
ಕೃಪೆ: ಶ್ರೀ. ಶ್ರೀಕಾಂತ್ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Pulling this world chariot is the bounden duty of every person.
The self-realized brave pulls it knowing it to be the play of God
But, one, who under illusion mistakes it to be his own family affair
For his own family enjoyment is a fool – Marula Muniya (474)
(Translation from "Thus Sang Marula Muniya" by Sri. Narasimha Bhat)

Friday, July 26, 2013

ಕಾರಾಗೃಹದ ಬಂದಿ ರಾಜಭಟ ಭಯದಿಂದ (473)

ಕಾರಾಗೃಹದ ಬಂದಿ ರಾಜಭಟ ಭಯದಿಂದ - |
ಲಾರಾಮದೂಳಿಗದಿ ದುಡಿವಂತೆ ಲೋಗರ್ ||
ಚಾರರಪ್ಪರ್ ಜಗದ್ವನದಿ ಮಾಯಾವಶದೆ |
ಧೀರರ್ ಸ್ವತಂತ್ರದಿಂ - ಮರುಳ ಮುನಿಯ || (೪೭೩)

(ಭಯದಿಂದಲ್+ಆರಾಮದ+ಊಳಿಗದಿ)(ಚಾರರ್+ಅಪ್ಪರ್)

ಸೆರೆಮನೆಯಲ್ಲಿ ಬಂದಿಯಾಗಿರುವ ಸೆರೆಯಾಳುಗಳು ರಾಜಭಟರ ಹೆದರಿಕೆಯಿಂದ ತೋಟ(ಆರಾಮ)ದ ಕೆಲಸದಲ್ಲಿ ದುಡಿಯುವಂತೆ, ಲೋಕದಲ್ಲಿ ವಾಸಿಸುವ ವಾಸಿಸುವ ಜನರು ಈ ಜಗತ್ತಿನ ಉದ್ಯಾನವನದಲ್ಲಿ ಮಾಯೆಯು ಹತೋಟಿಗೊಳಗಾಗಿ ಸೇವಕರಾಗುತ್ತಾರೆ. ಧೀರರಾದರೋ ತಮ್ಮ ಸ್ವಂತ ಇಚ್ಛೆಯಿಂದ ಜೀವನವನ್ನು ನಡೆಸುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A prisoner labours in the garden fearing the royal guards
Men likewise labour like slaves in the world-garden
Under the magical influence of Maya, but only the
Self-realized brave work according to their free will- Marula Muniya
(Translation from "Thus Sang Marula Muniya" by Sri. Narasimha Bhat)

Thursday, July 25, 2013

ಮಾಯಾತ್ಯಯಿತೆಯಲ್ತೆ ಪುರುಷಸಿದ್ಧಿಯ ಶಿಖರ (472)

ಮಾಯಾತ್ಯಯಿತೆಯಲ್ತೆ ಪುರುಷಸಿದ್ಧಿಯ ಶಿಖರ |
ನ್ಯಾಯವಕ್ಕುಂ ಜ್ಞಾನರಾಸಿಕ್ಯವದಕೆ ||
ಪ್ರೇಯಸಿಯೊಳಿನಿತೊಲಿದು ಮತ್ತಿನಿತ್ತಾಳ್ವವೊಲು |
ಮಾಯೆಯನು ಗೆಲುವುದೆಲೊ - ಮರುಳ ಮುನಿಯ || (472)

(ಮಾಯಾತ್ಯಯಿತೆ+ಅಲ್ತೆ)(ನ್ಯಾಯ+ಅಕ್ಕುಂ)(ಜ್ಞಾನರಾಸಿಕ್ಯ+ಅದಕೆ)(ಪ್ರೇಯಸಿಯೊಳ್+ಇನಿತು+ಒಲಿದು)(ಮತ್+ಇನಿತು+ಅಳ್ವವೊಲು)(ಗೆಲುವುದು+ಎಲೊ)

ಮಾಯೆಯ ಕ್ರೀಡೆಗಳನ್ನು ಅನುಭವಿಸಿ ಅದನ್ನು ದಾಟಿ ಹೋಗುವುದೇ (ಮಾಯಾತ್ಯಯಿತೆ) ಮನುಷ್ಯನು ಸಾಧಿಸಬೇಕಾದ ಗುರಿಯ ತುತ್ತ ತುದಿ. ಇದನ್ನು ಸಾಧಿಸಲು ಅವನಿಗೆ ಸರಿಯಾಗಿ ಬೇಕಾಗಿರುವುದು ಜ್ಞಾನವನ್ನು ಸವಿಯುವ ಗುಣ. ಪ್ರೇಯಸಿಯು ಸ್ವಲ್ಪ ಒಲಿದು ಮತ್ತು ಸ್ವಲ್ಪ ಅಳುವಂತೆ ಮಾಯೆಯನ್ನು ಗೆಲ್ಲಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is not overcoming Maya, the principle of human achievement?
Intense love of knowledge facilities this accomplishment.
Now with a little love and then with a little force as you win over your beloved
You should conquer Maya – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 24, 2013

ಕಾಯ ಸಂಪತ್ಪ್ರಗತಿ ಸಾಗಿ ಮುಂಬರಿದಂತೆ (471)

ಕಾಯ ಸಂಪತ್ಪ್ರಗತಿ ಸಾಗಿ ಮುಂಬರಿದಂತೆ |
ಪ್ರೇಯೋಪಭೋಗ ಸಾಮಗ್ರಿ ಬೆಳೆದಂತೆ ||
ಮಾಯೆಯಾನಾಯವನು ಬಿತ್ತರಿಸಿ ಲೋಗರನು- |
ಪಾಯದಿಂ ಪಿಡಿಯುವಳು - ಮರುಳ ಮುನಿಯ || (೪೭೧)

(ಸಂಪತ್+ಪ್ರಗತಿ)(ಪ್ರೇಯ+ಉಪಭೋಗ)(ಮಾಯೆಯು+ಆನಾಯವನು)(ಲೋಗರನ್+ಉಪಾಯದಿಂ)

ದೇಹದ ಸಿರಿಗಳನ್ನು ಒದಗಿಸುವ ಕಾರ್ಯಗಳು ಮತ್ತು ಏಳಿಗೆಗಳು ಮುಂದೆ ಸಾಗಿ ಹೋದಂತೆ, ಇಷ್ಟವಾದ ವಿಷಯಾನುಭವಗಳ ಸಲಕರಣೆಗಳು ಹೆಚ್ಚಾದಂತೆ, ಮಾಯೆಯು ತನ್ನ ಬಲೆಯನ್ನು(ಅನಾಯವನು) ಹರಡಿ, ಜನಗಳನ್ನು ಉಪಾಯದಿಂದ ಹಿಡಿಯುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

As progress, physical and economic gains momentum
As consumer goods and things of physical pleasure increase
Maya spreads her net far and wide and catches people
As planned by her – Marula Muniya (471)
(Translation from "Thus Sang Marula Muniya" by Sri. Narasimha Bhat)

Tuesday, July 23, 2013

ಮೊಗಮೊಗದ ಕದಪಿಂದೆ ಕಣ್ಣಿಂದೆ ತುಟಿಯಿಂದೆ (470)

ಮೊಗಮೊಗದ ಕದಪಿಂದೆ ಕಣ್ಣಿಂದೆ ತುಟಿಯಿಂದೆ |
ಬಗೆಬಗೆಯ ನುಡಿನುಡಿದು ಕೇಳ್ವರೆದೆಯಿರಿದು ||
ಜಗವ ಕುಲುಕಾಡಿಸುತೆ ಕಾಡಿಸುತೆ ಕಿರಿಚಿಸುತೆ |
ನಗುತಲಿರುವಳು ಮಾಯೆ - ಮರುಳ ಮುನಿಯ || (೪೭೦)

(ಕೇಳ್ವರ+ಎದೆ+ಇರಿದು)(ನಗುತ+ಇರುವಳು)

ತನ್ನ ಕೆನ್ನೆಗಳ(ಕದಪು) ಹೊಳಪಿನಿಂದ, ಕಣ್ಣುಗಳಿಂದ ಮತ್ತು ತುಟಿಗಳಿಂದ ವಿಧವಿಧವಾದ ಮಾತುಗಳನ್ನಾಡಿ, ಅವುಗಳನ್ನು ಆಲಿಸುವವರ ಎದೆಯನ್ನು ಚುಚ್ಚಿ, ಪ್ರಪಂಚವನ್ನು ಅಲ್ಲಾಡಿಸುತ್ತ, ಪೀಡಿಸುತ್ತ ಮತ್ತು ಅರಚುವಂತೆ ಮಾಡುತ್ತಾ ಮಾಯೆಯು ನಗುತ್ತಿರುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Maya fascinates with her face, cheeks, eyes and lips
She speaks sweet and enchanting words and pierces the hears of the listeners
Maya shakes the world, harasses and makes it scream,
But she is sending out pearls of laughter – Marula Muniya (470)
(Translation from "Thus Sang Marula Muniya" by Sri. Narasimha Bhat)

Monday, July 22, 2013

ಬಾಯನೂರಿಸಲಿಹುದು ಕರುಳ ತಣಿಸಲಿಕಿರದು (469)

ಬಾಯನೂರಿಸಲಿಹುದು ಕರುಳ ತಣಿಸಲಿಕಿರದು |
ಪಾಯಸದ ರುಚಿ ಜಗದ ಪಾಕಪಾತ್ರೆಯಲಿ ||
ಕೈಯನೆಳೆದಪ್ಪಿ ಕಾಲಿಂ ಸಗಣಿಯೊತ್ತಿಪುದು |
ಮಾಯೆಯ ವಿಲಾಸವೆಲೊ - ಮರುಳ ಮುನಿಯ || (೪೬೯)

(ಬಾಯನ್+ಊರಿಸಲ್+ಇಹುದು)(ತಣಿಸಲಿಕೆ+ಇರದು)(ಕೈಯನ್+ಎಳೆದು+ಅಪ್ಪಿ)(ಸಗಣಿ+ಒತ್ತಿಪುದು)

ರುಇಚಿಯಾದ ಪದಾರ್ಥಗಳನ್ನು ತಿನ್ನುವ ಬಯಕೆಗಳನ್ನು ಹುಟ್ಟಿಸಿ, ಬಾಯಲ್ಲಿ ನೀರೂರುವಂತೆ ಮಾಡಿ, ಆದರೆ ನಿನ್ನ ಕರುಳನ್ನು ತೃಪ್ತಿಪಡಿಸದಿರುವ, ಪಾಯಸದ ಸವಿ, (ಪಾಕ) ಜಗತ್ತಿನ ಅಡಿಗೆ ಪಾತ್ರೆಗಳಲ್ಲಿವೆ. ಕೈಗಳನ್ನು ಎಳೆದು ಅಪ್ಪಿಕೊಂಡು, ಕಾಲಿನಲ್ಲಿ ಸಗಣಿಯನ್ನು ಒತ್ತುವಂತೆ ಮಾಡುವುದು ಮಾಯೆಯ ಕ್ರೀಡೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sweet pudding prepared in the cooking vessel of the world
Is just sufficient to make your mouth water, but quite insufficient to fill your stomach
Maya in her play, pulls your hand and embraces you
But makes you stamp on the stinking cow dung – Marula Muniya
(Translation from "Thus Sang Marula Muniya" by Sri. Narasimha Bhat)

Friday, July 19, 2013

ಧೀಯ ಸೆಣಸಲಿಕಿರ‍್ಪುದಾತ್ಮನಿಶ್ಚಯಕಿರದು (468)

ಧೀಯ ಸೆಣಸಲಿಕಿರ‍್ಪುದಾತ್ಮನಿಶ್ಚಯಕಿರದು |
ಮೇಯತೆಯ ಭಾಸವೀ ಜಗದ ತನುಗಳಲಿ ||
ಕಾಯದಾರ್ಢ್ಯವ ತೋರಿ ವಾಯುವನು ತಬ್ಬಿಪುದು |
ಮಾಯೆಯ ವಿಲಾಸವೆಲೊ - ಮರುಳ ಮುನಿಯ || (೪೬೮)

(ಸೆಣಸಲಿಕೆ+ಇರ‍್ಪುದು+ಆತ್ಮನಿಶ್ಚಯಕೆ+ಇರದು)

ಬುದ್ಧಿಶಕ್ತಿ ಹೋರಾಡಲಿಕ್ಕೆ ಇದೆಯೇ ಹೊರತು, ಅದು ಆತ್ಮ ನಿರ್ಧಾರಕ್ಕಾಗಿ ಇಲ್ಲ. ಸೃಷ್ಟಿಯ ಜೀವಿಗಳಲ್ಲಿ ನಮಗೆ ಪ್ರಕೃತಿಯ ಶಕ್ತಿ ಸಾಮರ್ಥ್ಯಗಳನ್ನು ಅಳೆಯಲಿಕ್ಕೆ ಸಾಧ್ಯ(ಮೇಯ)ವೆನ್ನುವ ತೋರಿಕೆ(ಭಾಸ)ಯನ್ನು ಈ ಜಗತ್ತಿನ ದೇಹ(ತನು)ಗಳಲ್ಲಿ ಪ್ರಕೃತಿಯು ಇಟ್ಟಿದೆ. ದೇಹದ ಕಸು(ದಾರ್ಢ್ಯ)ವನ್ನು ತೋರಿಸಿ ಗಾಳಿ(ವಾಯು)ಯನ್ನು ತಬ್ಬಿಕೊಳ್ಳುವಂತೆ ಮಾಡುವುದು ಮಾಯೆಯ ವಿನೋದವಾದ ಆಟ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The human ability sufficient for intellectual endeavours
Is insufficient for self-realization, Human beings are under illusion
That they know the truth, Maya makes us display our powers
And embrace air and all this is Her play – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 18, 2013

ಪೇಯ ದುಷ್ಪೇಯಗಳ ಮಿಶ್ರಣವೊ ಸೃಷ್ಟಿರಸ (467)

ಪೇಯ ದುಷ್ಪೇಯಗಳ ಮಿಶ್ರಣವೊ ಸೃಷ್ಟಿರಸ |
ಜ್ಞೇಯ ದುರ್ಜ್ಞೇಯಗಳ ಮಿಶ್ರ ಸೃಷ್ಟಿಕೃತಿ ||
ಪ್ರೇಯದಿಂ ಕೆಣಕುತ ಪ್ರೇಯದಿಂ ಕಾಡುವುದು |
ಮಾಯೆಯ ವಿಲಾಸ ಕಲೆ - ಮರುಳ ಮುನಿಯ ||(೪೬೭)

ಕುಡಿಯಲು ಯೋಗ್ಯವಾದಂತಹ (ಪೇಯ) ಮತ್ತು ಕುಡಿಯಲು ಯೋಗ್ಯವಾಗಿರದಂತಹ ರಸಗಳ ಮಿಶ್ರಣವೇ ಸೃಷ್ಟಿ. ಸೃಷ್ಟಿಯ ರಚನೆಗಳು ಸಹ ನಾವು ತಿಳಿಯಲಿಕ್ಕೆ ಸಾಧ್ಯವಾದಂತಹ ಮತ್ತು ತಿಳಿಯಲು ಅಸಾಧ್ಯವಾದಂತಹುಗಳ ಕಲಸು ಮೇಲೋಗರ. ಪ್ರೀತಿಯಿಂದ ನಿನ್ನನ್ನು ಕೆರಳಿಸುತ್ತ ಮತ್ತು ಪ್ರೀತಿಯಿಂದ ದೂಷಿಸುತ್ತಾ ಪೀಡಿಸುವುದು ಮಾಯೆಯ, ವಿನೋದವಾದ ಕ್ರೀಡೆ ಆಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The life essence of Nature is a mixture of beverages good and bad
This work of the creation is a mixture of the knowable and the unknowable
Maya provokes you with pleasures and pesters you with pains
All art is the play of Maya – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 17, 2013

ಮೈಯ ಕೊಬ್ಬಿಸಿ ಬೆಳಸಿ ಬಳಿಕೊಂದು ದಿನ ಕುರಿಯ (466)

ಮೈಯ ಕೊಬ್ಬಿಸಿ ಬೆಳಸಿ ಬಳಿಕೊಂದು ದಿನ ಕುರಿಯ |
ಆಯದಿಂ ತಲೆಕಡಿದು ಮಾರ‍್ವ ಕಟುಕನವೋಲ್ ||
ಮಾಯೆ ನಿನ್ನನು ಸಲಹಿ ನಲವಿಟ್ಟದೊಂದು ದಿನ |
ಹೇಯಕೆಳೆವಳು ನಿನ್ನ - ಮರುಳ ಮುನಿಯ || (೪೬೬)

(ಬಳಿಕ+ಒಂದು)(ನಲವು+ಇಟ್ಟು+ಅದು+ಒಂದು)(ಹೇಯಕೆ+ಎಳೆವಳು)

ಕುರಿಗೆ ಚೆನ್ನಾಗಿ ಮೇವು ಹಾಕಿ ಅದರ ಮೈಯನ್ನು ಕೊಬ್ಬಿಸಿ, ಬೆಳೆಸಿ, ನಂತರ ಅದನ್ನು ಲಾಭ(ಆಯ)ಕ್ಕೋಸ್ಕರ ಮಾರುವ ಕಟುಕನಂತೆ, ಮಾಯೆಯೂ ಸಹ ನಿನ್ನನ್ನು ಚೆನ್ನಾಗಿ ಕಾಪಾಡಿ, ಪ್ರೀತಿಗಳನ್ನು ತೋರಿಸಿ, ಒಂದು ದಿನ ಕೆಟ್ಟ(ಹೇಯ)ಕೆಲಸಕ್ಕೆ ಎಳೆಯುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The butcher looks after the sheep well and sees that it grows fat and fleshy
When it is fully grown, he nicely beheads it and sells the meat
Similarly Maya lovingly nourishes and looks after you
But one day, she suddenly pushes you into the ditch of degradation – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 16, 2013

ತಾಯಾಗಿ ಮಗುವಾಗಿ ತಂದೆ ಸೋದರರಾಗಿ (465)

ತಾಯಾಗಿ ಮಗುವಾಗಿ ತಂದೆ ಸೋದರರಾಗಿ |
ಪ್ರೇಯಾಸಿಯುಮಾಗಿ ಕೆಳೆಯಾಗಿ ಪಗೆಯಾಗಿ ||
ಹೇಯದಾ ಧ್ಯೇಯದಾ ಬಾಂಧವ್ಯ ಕೋಟೆಯಲಿ |
ಮಾಯೆ ಪಿಡಿವಳು ನಿನ್ನ - ಮರುಳ ಮುನಿಯ || (೪೬೫)

ತಾಯಿಯಾಗಿ, ಮಗುವಾಗಿ, ತಂದೆಯಾಗಿ, ಸೋದರರಾಗಿ, ಪ್ರೇಯಸಿಯಾಗಿ, ಸ್ನೇಹಿತ(ಕೆಳೆ)ರಾಗಿ, ಶತ್ರು(ಪಗೆ)ಗಳಾಗಿ, ಈ ರೀತಿ ನಾನಾ ರೂಪಗಳಲ್ಲಿ ತ್ಯಜಿಸಲು (ಹೇಯ) ತಕ್ಕುದಾದ ಮತ್ತು ಗುರಿಗಳನ್ನು ಮುಟ್ಟಲು ಯೋಗ್ಯವಾದ ಕೋಟ್ಯಾಂತರ ನೆಂಟಸ್ತಿಕೆಗಳಲ್ಲಿ ಮಾಯೆಯು ನಿನ್ನನ್ನು ಸೆರೆಹಿಡಿಯುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In the forms of mother, child, father and brothers
In the forms of the beloved, friend and foe
In the fortress of such relationships, Detestable and exemplary
Maya makes you captive – Marula Muniya
(Translation from "Thus Sang Marula Muniya" by Sri. Narasimha Bhat)

Monday, July 15, 2013

ಆಯವರಿವವರಾರು ಸೃಷ್ಟಿಯುಡುಗೆಯನಳೆದು?

ಆಯವರಿವವರಾರು ಸೃಷ್ಟಿಯುಡುಗೆಯನಳೆದು ? |
ಮೇಯವಾಯ್ತೇನಂದು ದ್ರೌಪದಿಯ ದುಕುಲಂ ? ||
ಒಯ್ಯರದ ಸೆರಗನೊಂದೊಂದನೊಂದೊಂದು ಚಣ |
ಮಾಯೆ ಬೀಸುತ್ತಿಹಳೊ - ಮರುಳ ಮುನಿಯ || (೪೬೪)

(ಆಯ+ಅರಿವವರ್+ಆರು)(ಸೃಷ್ಟಿ+ಉಡುಗೆಯನ್+ಅಳೆದು)(ಮೇಯ+ಆಯ್ತೇನ್+ಅಂದು)(ಸೆರಗನ್+ಒಂದೊಂದನ್+ಒಂದೊಂದು)(ಬೀಸುತ್ತ+ಇಹಳೊ)

ಸೃಷ್ಟಿಯು ಉಟ್ಟುಕೊಂಡಿರುವ ವಸ್ತ್ರದ ವಿಸ್ತಾರ(ಆಯ)ವನ್ನು ಯಾರು ತಾನೆ ಅಳೆದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ? ಕೌರವರ ರಾಜಸಭೆಯಲ್ಲಿ ಪಾಂಡವರ ಪತ್ನಿಯಾದ ದ್ರೌಪದಿಯ ದುಕೂಲ(ದುಕುಲಂ)ವನ್ನು ಪೂರ್ಣವಾಗಿ ಎಳೆಯಲು ದುಃಶ್ಯಾಸನನಿಂದ ಆಯ್ತೇನು? ಬಿನ್ನಾಣ(ಒಯ್ಯಾರ)ದ ಒಂದೊಂದು ಸೆರಗನ್ನು ಒಂದೊಂದು ಕ್ಷಣವೂ ಮಾಯೆಯು ಬೀಸುತ್ತಾ ಇದ್ದಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who can measure Nature’s garments and know Her shape and size?
Could any one measure the sari of Draupadi on that day of yore?
The loose end of Her sari, Maya waves every moment
With a new grace – Marula Muniya (464)
(Translation from "Thus Sang Marula Muniya" by Sri. Narasimha Bhat)

Friday, July 12, 2013

ಪ್ರೇಮಿ ಸತಿ ಸುತರಿಷ್ಟಧನ ಮನೆ ಜಸಂಗಳು (463)

ಪ್ರೇಮಿ ಸತಿ ಸುತರಿಷ್ಟಧನ ಮನೆ ಜಸಂಗಳು |
ರಾಮಣೀಯಕವೆನಿಸಿ ಜೀವನವನೆಲ್ಲ ||
ಮೈಮರೆಸಿ ಮನವೊಲಿಸಿ ಕೊರಳಕೊಯ್ವುದು ಮಾಯೆ |
ನೇಮವನು ಮರೆಯದಿರು - ಮರುಳ ಮುನಿಯ || (೪೬೩)

(ಸುತರು+ಇಷ್ಟಧನ)(ರಾಮಣೀಯಕ+ಎನಿಸಿ)(ಜೀವನವನ್+ಎಲ್ಲ)(ಮರೆಯದೆ+ಇರು)

ಪ್ರೇಮಿ, ಸತಿ, ಮಗ(ಸುತ), ಇಷ್ಟಮಿತ್ರರು, ಐಶ್ವರ್ಯ, ಮನೆ ಮತ್ತು ಯಶಸ್ಸು (ಜಸ) ಇತ್ಯಾದಿಗಳಿಂದ ಜೀವನವೆಲ್ಲವನೂ ಸುಂದರವೆಂದೆನ್ನಿಸಿ (ರಾಮಣೀಯಕ) ನಿನ್ನನ್ನು ಮೈಮರೆಸುವಂತೆ ಮಾಡಿ, ನಿನ್ನ ಮನಸ್ಸನ್ನು ಒಲಿಸಿಕೊಂಡು ನಂತರ ಮಾಯೆಯು ನಿನ್ನ ಕತ್ತ(ಕೊರಳ್)ನ್ನು ಕೊಯ್ಯುತ್ತಾಳೆ. ನೀನು ಮಾತ್ರ ನಿಯಮ (ನೇಮ) ಮತ್ತು ಕಟ್ಟಳೆಗಳನ್ನು ಮರೆಯದೆ ಆಚರಿಸಿದರೆ, ಅದಕ್ಕೆ ಬಲಿಯಾಗದಿರಲು ಸಾಧ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

She overwhelms us as lover, wife, sons, friends, wealth, home and fame
For some time it looks as though human life is the abode of joy
She enchants our body and mind and suddenly stabs us in the back
Forget not thou the principle of forbearance even for a moment – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 11, 2013

ತಾಯೊಲುಮೆ ಕಣ್ಣಾಗಿ ತಂದೆಯೊಳ್ನುಡಿಯಾಗಿ (462)

ತಾಯೊಲುಮೆ ಕಣ್ಣಾಗಿ ತಂದೆಯೊಳ್ನುಡಿಯಾಗಿ |
ಪ್ರೇಯಸಿಯ ನಗುವಾಗಿ ಸುತ ಮಮತೆಯಾಗಿ ||
ಗಾಯನ ಕಲಾ ಕಾವ್ಯ ಶಾಸ್ತ್ರಾಭಿರುಚಿಯಾಗಿ |
ಮಾಯೆ ಸುಳಿದಾಡುವಳೊ - ಮರುಳ ಮುನಿಯ || (೪೬೨)

(ತಾಯ+ಒಲುಮೆ)(ತಂದೆಯ+ಒಳ್ನುಡಿ+ಆಗಿ)

ತಾಯಿಯ ಪ್ರೀತಿ ಮತ್ತು ಕಣ್ಣುಗಳಾಗಿ, ತಂದೆಯು ಹೇಳುವ ಒಳ್ಳೆಯ ಮಾತುಗಳಾಗಿ, ತನ್ನ ಪ್ರೀತಿಪಾತ್ರಳಾದವಳ ನಗುವಾಗಿ, ಮಗ(ಸುತ)ನ ಮಮತೆಯಾಗಿ, ಸಂಗೀತ, ಕಲೆ, ಕಾವ್ಯ ಮತ್ತು ಶಾಸ್ತ್ರಗಳಲ್ಲಿನ ರಸಾಸ್ವಾದನ ಶಕ್ತಿಯಾಗಿ, ಮಾಯೆಯು ಈ ಪ್ರಪಂಚದಲ್ಲಿ ಸಂಚರಿಸುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

As the loving eyes of mother and father’s kind advice
As the lilting laughter of wife and the affection of son,
As interest in music, arts, poetry and sciences
Maya, is moving about – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 10, 2013

ಬಾಳೆಗೊನೆಯೊಂದರಿನಿವಣ್ಣ ನೂರರೊಳೆಲ್ಲೊ (461)

ಬಾಳೆಗೊನೆಯೊಂದರಿನಿವಣ್ಣ ನೂರರೊಳೆಲ್ಲೊ |
ಮೇಳಿಸಿಹನೊಂದರೊಳು ಸುಧೆಯನಜನೆಂಬರ್ ||
ಆಳೆನಿಬರಿರ‍್ದೊಡೇಂ ವ್ಯಕ್ತಿಬಲದಿಂ ನಾಡಿ - |
ನೇಳಿಗೆಯು ನಿಶ್ಚಿತವೊ - ಮರುಳ ಮುನಿಯ || (೪೬೧)

(ಬಾಳೆಗೊನೆ+ಒಂದರ+ಇನಿವಣ್ಣ)(ನೂರರೊಳ್+ಎಲ್ಲೊ)(ಮೇಳಿಸಿ+ಇಹನು+ಒಂದರೊಳು)(ಸುಧೆಯನ್+ಅಜನ್+ಎಂಬರ್)
(ಆಳ್+ಎನಿಬರ್+ಇರ‍್ದೊಡೆ+ಏಂ)(ನಾಡಿನ+ಏಳಿಗೆಯು)

ಸಿಹಿಯಾದ ಹಣ್ಣು(ಇನಿವಣ್ಣು)ಗಳಿಂದ ಕೂಡಿದ ನೂರಾರು ಬಾಳೆಗೊನೆಗಳಲ್ಲಿ ಯಾವುದೋ ಒಂದರಲ್ಲಿ ಮಾತ್ರ ಬ್ರಹ್ಮನು (ಅಜ) ಅಮೃತ(ಸುಧೆ)ವನ್ನು ಸೇರಿಸಿಟ್ಟಿರುವನೆನ್ನುತ್ತಾರೆ. ಎಷ್ಟು ಜನರಿದ್ದೇನು ಬಂತು? ಬಿಡಿ ವ್ಯಕ್ತಿಯ ಶಕ್ತಿಯಿಂದ ದೇಶದ ಪ್ರಗತಿ ಎನ್ನುವುದು ನಿರ್ಧಾರವಾಗಿರುವ ವಿಷಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In a bunch of hundred plantains sweet
It is said that Brahma has hidden ambrosia in only one
Men may be many but the prosperity of a nation is assured
Only when merited individuals endeavour – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 9, 2013

ವ್ಯಕ್ತಿಕಾಂತಿಯೆ ಜಗತ್ಸೃಷ್ಟಿ ನಿಟಿಲದ ತಿಲಕ (460)

ವ್ಯಕ್ತಿಕಾಂತಿಯೆ ಜಗತ್ಸೃಷ್ಟಿ ನಿಟಿಲದ ತಿಲಕ |
ಸಕ್ತಿಯದರಿನೆ ವಿಷಯಗಳಲಿ ಮನುಜಂಗೆ ||
ರಿಕ್ತ ಜೀವನವಲ್ತೆ ವಿರ್ವ್ಯಕ್ತಿಯಾಗೆ ಜಗ? |
ವ್ಯಕ್ತಿತೆ ಪವಿತ್ರವೆಲೊ - ಮರುಳ ಮುನಿಯ || (೪೬೦)

(ಸಕ್ತಿ+ಅದರಿನೆ)(ಜೀವನವು+ಅಲ್ತೆ)(ವಿರ್ವ್ಯಕ್ತಿ+ಆಗೆ)(ಪವಿತ್ರ+ಎಲೊ)

ವ್ಯಕ್ತಿಯ ವರ್ಚಸ್ಸೇ ಪ್ರಪಂಚದ ಸೃಷ್ಟಿಯ ಹಣೆಯ (ನಿಟಿಲ) ಮೇಲಿನ ಬೊಟ್ಟು (ತಿಲಕ). ಇದರಿಂದಲೇ ಮನುಷ್ಯನಿಗೆ ಭೋಗಾಭಿಲಷೆಗಳಲ್ಲಿ(ವಿಷಯ) ಆಸಕ್ತಿ(ಸಕ್ತಿ)ಯುಂಟಾಗುವುದು. ವ್ಯಕ್ತಿಯೇ ಇಲ್ಲದಿದ್ದಲ್ಲಿ ಜೀವನವು ಶೂನ್ಯವಾಗಿ(ರಿಕ್ತ) ಹೋಗುತ್ತದಲ್ಲವೇ? ಆದುದ್ದರಿಂದ ವ್ಯಕ್ತಿತೆ ಎನ್ನುವುದು ಬಹು ಪವಿತ್ರ ಮತ್ತು ಶುದ್ಧವಾದದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Individual greatness is the ornamental mark on the forehead of universe
It inspires individuals to evince interest in various matters
Will not the world become lifeless if such merited individuals are absent?
Individuality is great and sacred – Marula Muniya (460)
(Translation from "Thus Sang Marula Muniya" by Sri. Narasimha Bhat)

Monday, July 8, 2013

ನೂಲೆಳೆಯ ಹಾಸುಹೊಕ್ಕುಗಳಿಂದ ನಲ್‍ಶಾಲೆ (459)

ನೂಲೆಳೆಯ ಹಾಸುಹೊಕ್ಕುಗಳಿಂದ ನಲ್‍ಶಾಲೆ |
ಶಾಲೆಯೇನಾದೀತು ನೂಲ ನೀಂ ಪರಿಯೆ ||
ಬಾಳೊಂದದೇನು ನಾಡೇಳ್ಗೆಗೆಂದೆನ್ನದಿರು |
ಆಳು ಚೆನ್ನಿರೆ ಬಾಳು - ಮರುಳ ಮುನಿಯ || (೪೫೯)

(ನೂಲ್+ಎಳೆಯ)(ಶಾಲೆ+ಏನು+ಆದೀತು)(ಬಾಳ್+ಒಂದು+ಅದು+ಏನು)(ನಾಡ+ಏಳಿಗೆಗೆ+ಎಂದು+ಎನ್ನದೆ+ಇರು)(ಚೆನ್ನ+ಇರೆ)

ಉದ್ದುದ್ದು(ಹಾಸು) ಮತ್ತು ಅಡ್ಡ(ಹೊಕ್ಕು) ದಾರಗಳ (ನೂಲ್) ತಂತು(ಎಳೆ)ಗಳಿಂದ ಒಂದು ಒಳ್ಳೆಯ ಸೀರೆ(ಶಾಲೆ)ಯು ನೇಯಲ್ಪಡುತ್ತದೆ. ಆ ದಾರಗಳನ್ನು ನೀನು ಕಿತ್ತು, ಹರಿದು ಹಾಕಿದ್ದಲ್ಲಿ, ಸೀರೆಯ ಗತಿ ಏನಾಗುತ್ತದೆ? ದೇಶದ ಅಭಿವೃದ್ಧಿಗೆ ಒಬ್ಬನ ಜೀವನದಿಂದ ಆಗಬೇಕಾದದ್ದೇನೂ ಇಲ್ಲವೆಂದೆನ್ನಬೇಡ. ಪ್ರತಿಯೊಬ್ಬ ಪ್ರಜೆಯೂ ತನ್ನ ಜೀವನವನ್ನು ಚೆನ್ನಾಗಿ ನಡೆಸಿದರೆ ಒಂದು ದೇಶವು ಮೇಲಕ್ಕೆ ಬರಲು ಸಾಧ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A fine shawl from the yarn woven in warps and wefts
There will be no shawl if you tear off the yarn
Don’t think that an individual is not needed for the good of a country
A country can be good and great only if every subject is so – Marula Muniya
(Translation from "Thus Sang Marula Muniya" by Sri. Narasimha Bhat)

Friday, July 5, 2013

ಅಷ್ಟವಕ್ರಂಗೆ ಕೃಷ್ಣಂಗಿರ‍್ದವೊಲೆ ದೇಹ (458)

ಅಷ್ಟವಕ್ರಂಗೆ ಕೃಷ್ಣಂಗಿರ‍್ದವೊಲೆ ದೇಹ |
ಸೊಟ್ಟುತನ ಬಿಟ್ಟೆಲ್ಲ ಸಾಮ್ಯವಿರ‍್ವರಿಗಂ ||
ದೃಷ್ಟಿಸಿದರೇಂ ಗೋಪಿಯರ್ ಮುನಿಯ ಲೋಕದಲಿ |
ವ್ಯಷ್ಟಿಗುಣದಿನೆ ಗಣನೆ - ಮರುಳ ಮುನಿಯ || (೪೫೮)

(ಕೃಷ್ಣಂಗೆ+ಇರ‍್ದ+ವೊಲೆ)(ಬಿಟ್ಟು+ಎಲ್ಲ)(ಸಾಮ್ಯ+ಇರ‍್ವರಿಗಂ)

ಅಷ್ಟಾವಕ್ರನೆಂಬ ಡೊಂಕು ಡೊಂಕಾದ ಆವಯವಗಳಿಂದ ಋಷಿಗೂ ಸಹ, ಸುಂದರ ರೂಪವುಳ್ಳ ಶ್ರೀ ಕೃಷ್ಣ ಪರಮಾತ್ಮನಿಗಿದ್ದ ಆವಯವಗಳೇ ಇದ್ದವು. ಇವನ ಆವಯವಗಳು ಮಾತ್ರ ಸೊಟ್ಟ ಅಷ್ಟೆ. ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣ ಪರಮಾತ್ಮನ ಸುಂದರ ಮನೋಹರವಾದ ರೂಪವನ್ನು ಅಷ್ಟಾವಕ್ರನಲ್ಲಿ ಕಂಡರೇನು? ಇಲ್ಲ. ಆದ್ದರಿಂದ ಪ್ರಪಂಚವು ಬಿಡಿ (ವ್ಯಷ್ಟಿ) ವ್ಯಕ್ತಿಯ ಸ್ವಭಾವವನ್ನೇ ಯಾವಗಾಲೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sage Ashtavakra and Shri Krishna had similar physical frames
Except the bodily distortions of Ashtavakra, other features were similar
But did the Gopi damsels glance at him even once?
An individual counts only on the basic of his own merits – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 4, 2013

ಎತ್ತೆತ್ತಲಿನ ಜವುಗೊ ಎಷ್ಟು ನೆಲದೂಟೆಗಳೊ (457)

ಎತ್ತೆತ್ತಲಿನ ಜವುಗೊ ಎಷ್ಟು ನೆಲದೂಟೆಗಳೊ |
ಬೆಟ್ಟ ಕಾಡುಗಳೊರತೆ ಹಳ್ಳ ಹರಿತಗಳೋ ||
ಎಷ್ಟೂರ ರೊಚ್ಚುಗಳೊ ಕೂಡಿ ನದಿಯಪ್ಪಂತೆ |
ವ್ಯಕ್ತಿಬಲ ಮೂಲವೆಲೊ - ಮರುಳ ಮುನಿಯ || (೪೫೭)

(ನೆಲದ+ಊಟೆಗಳೊ)(ಕಾಡುಗಳ+ಒರತೆ)(ನದಿ+ಅಪ್ಪಂತೆ)(ಮೂಲ+ಎಲೊ)

ಎಲ್ಲೆಲ್ಲಿಂದ ಬಂದ ಜಿನುಗುವ ನೆಲವೋ, ಭೂಮಿಯಲ್ಲಿರುವ ಎಷ್ಟು ಚಿಲುಮೆಗಳೋ, ಬೆಟ್ಟ ಮತ್ತು ಕಾಡುಗಳಲ್ಲಿರುವ ಜಿನುಗುವ ನೀರುಗಳ (ಒರತೆ) ಪ್ರದೇಶಗಳೋ, ಎಷ್ಟು ತಗ್ಗುಗಳಲ್ಲಿ ನೀರು ಹರಿಯುತ್ತದೆಯೋ, ಮತ್ತು ಎಷ್ಟು ಊರುಗಳ ಕೊಚ್ಚೆಗಳೋ, ಇವುಗಳೆಲ್ಲವೂ ಸೇರಿ ಒಂದು ನದಿಯಾಗುವುವಂತೆ, ವ್ಯಕ್ತಿಯ ಶಕ್ತಿಯೇ ಸಮೂಹದ ಶಕ್ತಿಯ ಮೂಲಕಾರಣ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The marshes of many areas and many underground springs,
The springs and streams of many forests and hills
The waste water of many places come together and flow as a river
Individual capability is likewise the basic factor – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 3, 2013

ವ್ಯಷ್ಟಿಗೆಡೆಬಿಡಿಸದ ಸಮಷ್ಟಿಯೇಂ ಬೆಳೆದೀತು? (456)

ವ್ಯಷ್ಟಿಗೆಡೆಬಿಡಿಸದ ಸಮಷ್ಟಿಯೇಂ ಬೆಳೆದೀತು? |
ಸೃಷ್ಟಿಯೊಂದೊಂದು ಜೀವಕಮೊಂದು ಬೆಲೆಯನ್ ||
ಇಟ್ಟಿಹಳದನು ರಾಷ್ಟ್ರದೊಟ್ಟು ಮರೆತೆಣಿಸದಿರೆ |
ನಷ್ಟವಷ್ಟಕಮಲ್ತೆ - ಮರುಳ ಮುನಿಯ || (೪೫೬)

(ವ್ಯಷ್ಟಿಗೆ+ಎಡೆಬಿಡಿಸದ)(ಸೃಷ್ಟಿಯ+ಒಂದೊಂದು)(ಜೀವಕಂ+ಒಂದು)(ಇಟ್ಟಿಹಳ್+ಅದನು)(ರಾಷ್ಟ್ರದ+ಒಟ್ಟು)(ಮರೆತು+ಎಣಿಸದೆ+ಇರೆ)(ನಷ್ಟವು+ಅಷ್ಟಕಂ+ಅಲ್ತೆ)

ಬಿಡಿ(ವ್ಯಷ್ಟಿ)ಯಾಗಿರುವುದಕ್ಕೆ ಅವಕಾಶವನ್ನು ಕೊಡದಿರುವ ಸಮೂಹ(ಸಮಷ್ಟಿ)ವು ಹೇಗೆ ತಾನೇ ಬೆಳೆದೀತು? ಸೃಷ್ಟಿಯಲ್ಲಿ ಒಂದೊಂದು ಜೀವಕ್ಕೂ ಒಂದೊಂದು ಬೆಲೆಯನ್ನು ಪ್ರಕೃತಿಯು ಇಟ್ಟಿದ್ದಾಳೆ. ಈ ವಿಚಾರವನ್ನು ಮರೆತು ದೇಶದ ಸಮೂಹವು ಅದನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಅಷ್ಟರಮಟ್ಟಿಗೆ ನಷ್ಟವಾಗುತ್ತದೆ ತಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can the community ever grow if it allows no room for individual development?
Nature has marked a price to every being on earth
If the nation as a whole forgets to count it
Is it not a loss to the whole nation? - Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 2, 2013

ಎರಕದಚ್ಚಿನ ಯಂತ್ರದಿಂದ ಗಣನೆಯ ಮೀರಿ (455)

ಎರಕದಚ್ಚಿನ ಯಂತ್ರದಿಂದ ಗಣನೆಯ ಮೀರಿ |
ಸರಕಮಾಳ್ಪ ಪ್ರಕೃತಿಗೊಂದು ಪುರುಳೇನು? ||
ನರಕುಲದೊಳವಳದೊರ್ವನ ಬೆಲೆಯ ಲೆಕ್ಕಿಪಳೆ? |
ಓರುವನೇನೆನ್ನುವೆಯೊ? - ಮರುಳ ಮುನಿಯ || (೪೫೫)

(ಎರಕದ+ಅಚ್ಚಿನ)(ಸರಕು+ಮಾಳ್ಪ)(ಪುರುಳ್+ಏನು)(ನರಕುಲದೊಳ್+ಅವಳು+ಅದು+ಒರ್ವನ)(ಓರುವನ್+ಏನು+ಎನ್ನುವೆಯೊ)

ಒಂದಾದ ಮೇಲೊಂದಂತೆ ಒಂದೇ ಬಗೆಯ ಪದಾರ್ಥವನ್ನು ಎರಕಹಾಕುವ ಅಚ್ಚಿನ ಯಂತ್ರದಿಂದ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಸರಕನ್ನು ಮಾಡುವ ಪ್ರಕೃತಿಗೆ ಇರುವ ಸಾರಪದಾರ್ಥವು ಯಾವುದು? ಮನುಷ್ಯ ಪೀಳಿಗೆಯಲ್ಲಿ ಅವಳು ಒಬ್ಬನ ಬೆಲೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಳೇನು? ಎಂದಮೇಲೆ ನಾನೊಬ್ಬ ಯಾವ ಲೆಕ್ಕ ಎನ್ನುವೆಯೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Countless objects Nature produces in Her mould
Is anyone among these indispensable and invaluable to Her?
Does she reckon the value of each and every individual in mankind?
What do you say oh individual? – Marula Muniya
(Translation from "Thus Sang Marula Muniya" by Sri. Narasimha Bhat)

Monday, July 1, 2013

ಒರುವನನುಮೆಣಿಸುವಳು ಪೋಲು ಮಾಡಳ್ ಪ್ರಕೃತಿ (454)

ಒರುವನನುಮೆಣಿಸುವಳು ಪೋಲು ಮಾಡಳ್ ಪ್ರಕೃತಿ |
ಕುರುಡೆರಕವವಳೆಸಕವಲ್ಲ ಮರೆಯದವಳ್ ||
ಇರಿಸಿರ‍್ಪಳೋರೋರ‍್ವನೊಳುಮವನು ತನ್ನ ತಾಂ |
ಪೊರೆದುಕೊಳೆ ಕೀಲೊಂದ - ಮರುಳ ಮುನಿಯ || (೪೫೪)

(ಒರುವನನುಂ+ಎಣಿಸುವಳು)(ಕುರುಡು+ಎರಕವು+ಅವಳ್+ಎಸಕವಲ್ಲ)(ಮರೆಯದ+ಅವಳ್)(ಇರಿಸಿರ‍್ಪಳು+ಓರೋರ‍್ವನೊಳಂ+ಅವನು)(ಕೀಲ್+ಒಂದ)

ಪ್ರಕೃತಿ ಪ್ರತಿಯೊಬ್ಬಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾಳೆ. ಅವಳು ದುಂದುವೆಚ್ಚವನ್ನು ಮಾಡುವುದಿಲ್ಲ. ಅವಳು ಮಾಡುವ ಕೆಲಸಗಳು ಕುರುಡು ಎರಕದಚ್ಚಿನಂತೆ ಮಾಡುವ ಕಾರ್ಯಗಳಲ್ಲ. ಅವಳು ಏನನ್ನೂ ಮರೆಯುವುದೂ ಇಲ್ಲ. ಪ್ರತಿಯೊಬ್ಬನಲ್ಲೂ ತನ್ನನ್ನು ತಾನೇ ಕಾಪಾಡಿ(ಪೊರೆ)ಕೊಳ್ಳುವ ಕೀಲೊಂದನ್ನು ಇರಿಸಿದ್ದಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature counts each and everyone and she wastes nothing
Her’s is not a blind mould, but she in everyone has preserved
A device that enables him to look after himself
She forgets no one- Marula Muniya
(Translation from "Thus Sang Marula Muniya" by Sri. Narasimha Bhat)