Thursday, March 29, 2012

ತನುವೊಳುಸಿರಾಡಿಯುಂ ಮನಸು ಸತ್ತವೊಲಿರಲಿ (183)

ತನುವೊಳುಸಿರಾಡಿಯುಂ ಮನಸು ಸತ್ತವೊಲಿರಲಿ |
ಮನಸು ಬಾಳ್ದುಂ ತನುವು ಸತ್ತವೊಲಿರಲಿ ||
ತನುಮನಗಳೊಂದಾಗಿ ಬೇರೆ ಜಗವಿರದಾಗಿ |
ಮಿನುಗುಗಾತ್ಮವದೊಂದೆ - ಮರುಳ ಮುನಿಯ || (೧೮೪)

(ತನುವೊಳ್+ಉಸಿರಾಡಿಯುಂ)(ಸತ್ತವೊಲ್+ಇರಲಿ)(ತನುಮನಗಳ್+ಒಂದಾಗಿ)(ಜಗ+ಇರದಾಗಿ)(ಮಿನುಗುಗು+ಆತ್ಮ+ಅದು+ಒಂದೆ)

ದೇಹ ಚಟುವಟಿಕೆಯಿಂದ ಕೂಡಿದ್ದರೂ ಮನಸ್ಸು ಸತ್ತ್ವದಲ್ಲಿರಲಿ. ಮನಸ್ಸು ಲೋಕವ್ಯವಹಾರದಲ್ಲಿ ತೊಡಗಿದ್ದರೂ ದೇಹ ಸತ್ತ್ವದಲ್ಲಿರಲಿ. ದೇಹ ಮನಸ್ಸುಗಳೆರಡೂ ಐಕ್ಯವಾಗಿ ಬೇರೇನೂ ಇಲ್ಲದಾಗ ಆತ್ಮವೊಂದೆ ಪ್ರಕಾಶಿಸುತ್ತದೆ.

Wednesday, March 28, 2012

ನಾನು ನಾನೆನುವ ನಿನ್ನಂತರಾತ್ಮದ ಗಂಗೆ (183)

ನಾನು ನಾನೆನುವ ನಿನ್ನಂತರಾತ್ಮದ ಗಂಗೆ |
ನಾನಾ ಪ್ರಪಂಚಾಂತರಾತ್ಮ ಸಾಗರದಿ ||
ಲೀನವಹ ಸಂಗಮ ಸ್ಥಾನ ದೈವ ಪ್ರತಿಮೆ |
ಧ್ಯಾನಸಂಧಾನವದು - ಮರುಳ ಮುನಿಯ || (೧೮೩)

(ನಾನ್+ಎನುವ)(ನಿನ್ನ+ಅಂತರಾತ್ಮದ)(ಪ್ರಪಂಚ+ಅಂತರಾತ್ಮ)(ಲೀನ+ಅಹ)

ನಾನು ನಾನೇ ಎನ್ನುವ ಅಂತರಾತ್ಮದಲ್ಲಿರುವ ಪವಿತ್ರವಾದ ಜಲವನ್ನು, ಪ್ರಪಂಚದ ವಿಧವಿಧವಾದ ಅಂತರಾತ್ಮಗಳೆಂಬ ಸಮುದ್ರದಲ್ಲಿ, ಸೇರಿಸುವ ಸ್ಥಳವೇ ದೇವರ ವಿಗ್ರಹ ಆಗಿದೆ. ಇದನ್ನು ಧ್ಯಾನದ ಹೊಂದಾಣಿಕೆಯಿಂದ ತಿಳಿಯಬಹುದು.

ನಾನು ನಾನೆಂದು ನಿನ್ನೊಳುಸಿರ‍್ವ ಚೇತನವ (182)


ನಾನು ನಾನೆಂದು ನಿನ್ನೊಳುಸಿರ‍್ವ ಚೇತನವ |
ಭಾನು ಶಶಿಗಳ ಮೀರ‍್ದ ವಿಶ್ವಚೇತನಕೆ ||
ಧ್ಯಾನಸೂತ್ರದೆ ಗಂಟನಿಡುವ ಪ್ರತೀಕ ಸಂ-|
ಧಾನವೇ ಪೂಜೆಯೆಲೊ - ಮರುಳ ಮುನಿಯ || (೧೮೨)

(ನಾನ್+ಎಂದು)(ನಿನ್ನೊಳ್+ಉಸಿರ‍್ವ)(ಗಂಟನ್+ಇಡುವ)

ಭಗವಂತನ ಪೂಜೆಯೆಂದರೇನು ಎನ್ನುವ ಬಗ್ಗೆ ಒಂದು ವಿವರಣೆಯನ್ನು ಮಾನ್ಯ ಡಿ.ವಿ.ಜಿ.ಯವರು ಇಲ್ಲಿ ಕೊಡುತ್ತಿದ್ದಾರೆ. ನಾನು, ನಾನು, ಎಂದು ನಿನ್ನ ಒಳಗಡೆ ಉಸಿರುತ್ತಿರುವ ಚೈತನ್ಯವನ್ನು, ಸೂರ್ಯ (ಭಾನು) ಮತ್ತು ಚಂದ್ರ(ಶಶಿ)ರುಗಳನ್ನು ದಾಟಿದ ವಿಶ್ವದ ಚೈತನ್ಯಕ್ಕೆ, ಧ್ಯಾನ ಸೂತ್ರದಿಂದ ಬಂಧಿಸುವ ಚಿಹ್ನೆ ಮತ್ತು ಪ್ರತಿಬಿಂಬ(ಪ್ರತೀಕ)ಗಳ ಹೊಂದಾಣಿಕೆ(ಸಂಧಾನ)ಯೇ ಪೂಜೆ.

Monday, March 26, 2012

ತಡೆಯಿರದೊಡತ್ತಿತ್ತ ಪರಿದಾಡುವುದು ನೀರು (181)

ತಡೆಯಿರದೊಡತ್ತಿತ್ತ ಪರಿದಾಡುವುದು ನೀರು |
ಎಡೆಯ ಗೊತ್ತೊಂದಿರದ ನರಮನವುಮಂತು ||
ಗುಡಿಯೆಂಬುದಿನ್ನೇನು ? ನಿನ್ನಾತ್ಮಕದು ಕೇಂದ್ರ |
ನೆಡು ಮನವನದರೊಳಗೆ - ಮರುಳ ಮುನಿಯ || (೧೮೧)

(ತಡೆಯಿರದೊಡೆ+ಅತ್ತಿತ್ತ)(ಪರಿದು+ಆಡುವುದು)(ಗೊತ್ತು+ಒಂದು+ಇರದ)(ನರಮನವುಂ+ಅಂತು)(ಗುಡಿ+ಎಂಬುದು+ಇನ್ನೇನು)(ನಿನ್ನ+ಆತ್ಮಕೆ+ಅದು)(ಮನವನ್+ಅದರ+ಒಳಗೆ)

ಯಾವ ವಿಧವಾದ ಅಡೆತಡೆಗಳಿಲ್ಲದಿದ್ದಲ್ಲಿ, ನೀರು ಎಲ್ಲೆಡೆಯೂ ಹರಿಯುತ್ತದೆ. ಒಂದು ನೆಲೆ ಮತ್ತು ಲಕ್ಷ್ಯ ಇಲ್ಲದಿರುವ ಮನುಷ್ಯನ ಮನಸ್ಸೂ ಸಹ ಹಾಗೆಯೇ ಹರಿದಾಡುತ್ತದೆ. ದೇವಸ್ಥಾನ ಎನ್ನುವುದು ನಿನ್ನ ಆತ್ಮಕ್ಕೆ ಒಂದು ಕೇಂದ್ರ ಸ್ಥಳ. ನಿನ್ನ ಮನಸ್ಸನ್ನು ಅದರೊಳಗೆ ಇಡು.

Sunday, March 25, 2012

ದೃಶ್ಯವೆಲ್ಲಂ ನಶ್ಯವೆಂಬರಂತಿರೆಯುಮೀ - (180)


ದೃಶ್ಯವೆಲ್ಲಂ ನಶ್ಯವೆಂಬರಂತಿರೆಯುಮೀ - |
ದೃಶ್ಯಮಿರ‍್ವನ್ನಮದು ದ್ರಷ್ಟವ್ಯಮಲ್ತೆ ||
ಸಸ್ಯವಳಿದೊಡಮದರ ಫಲ ನಿನ್ನ ಜೀವಿತಕೆ |
ರಸ್ಯಾನ್ನವಾಯಿತಲ! - ಮರುಳ ಮುನಿಯ || (೧೮೦)

(ದೃಶ್ಯ+ಎಲ್ಲಂ)(ನಶ್ಯ+ಎಂಬರಂತು+ಇರೆಯುಂ+ಈ)(ದೃಶ್ಯಂ+ಇರ‍್ವನ್ನಂ+ಅದು)(ದ್ರಷ್ಟವ್ಯಂ+ಅಲ್ತೆ)(ಸಸ್ಯ+ಅಳಿದೊಡಂ+ಅದರ)(ರಸ್ಯಾನ್ನ+ಆಯಿತು+ಅಲ)

ನಮ್ಮ ಕಣ್ಣುಗಳಿಗೆ ಗೋಚರಿಸತಕ್ಕಂತಹುದೆಲ್ಲವೂ (ದೃಶ್ಯ) ಶಾಶ್ವತವಲ್ಲ (ನಶ್ಯ), ಎಂಬಂತೆ ಇದ್ದರೂ ಸಹ, ಅವು ಗೋಚರಿಸುವವರೆಗೂ, ಅವು ನೋಡಬೇಕಾದಂತಹ (ದ್ರಷ್ಟವ್ಯ) ವಸ್ತುಗಳು ತಾನೇ? ಒಂದು ಗಿಡ(ಸಸ್ಯ)ವು ಸತ್ತು(ಆಳಿ)ಹೋದರೂ ಸಹ ಅದರ ಫಸಲು (ಫಲ) ನಿನ್ನ ಜೀವನಕ್ಕೆ ಆಸ್ವಾದವಾದ ಅಹಾರ(ರಸ್ಯಾನ್ನ)ವಾಯಿತಲ್ಲವೇ?

Thursday, March 22, 2012

ನೂರು ನೂರ‍್ಬೇರೆ ಬೇರ್ ಬೇರು ನಾರ್ ಮತ ಲತೆಗೆ (179)

ನೂರು ನೂರ‍್ಬೇರೆ ಬೇರ್ ಬೇರು ನಾರ್ ಮತ ಲತೆಗೆ |
ಪೂರ‍್ವಿಕೋಕ್ತ್ಯಾಚಾರ ಸಂಪ್ರದಾಯಗಳು ||
ಶಾರೀರ ಮಾನಸಿಕ ಬುದ್ಧಿಯುಕ್ತ್ಯನುಭವವು |
ಪೂರ ಸಾಗದು ತರ್ಕ - ಮರುಳ ಮುನಿಯ || (೧೭೯)

(ನೂರು+‍ಬೇರೆ)(ಪೂರ‍್ವಿಕ+ಉಕ್ತಿ+ಆಚಾರ)(ಬುದ್ಧಿ+ಯುಕ್ತಿ+ಅನುಭವವು)

ವಿಚಾರ ಮತ್ತು ಅಭಿಪ್ರಾಯಗಳೆಂಬ ಬಳ್ಳಿಗೆ, ನೂರಾರು ಬೇರೆ ಬೇರೆ ಬೇರುಗಳು ಮತ್ತು ನಾರುಗಳಿವೆ. ಅವುಗಳೇನೆಂದರೆ ನಮ್ಮ ಪೂರ್ವಿಕರು ಹೇಳಿದ, ಧಾರ್ಮಿಕ ಜೀವನದಲ್ಲಿ ಅನುಸರಿಸಬೇಕಾದ ನಿಯಮಗಳು, ಪರಂಪರಾನುಗತವಾಗಿ ಬಂದ ಪದ್ಧತಿಗಳು ಮತ್ತು ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಬುದ್ಧಿಶಕ್ತಿಗೆ ನಿಲುಕುವ ಅನುಭವಗಳು. ಕೇವಲ ವಾದಗಳು ನಮ್ಮನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ಗುರಿಮುಟ್ಟಿಸಲಾರವು.

Wednesday, March 21, 2012

ಒಂದೊಡಲು ನಿಂದಿರ್ಪುದೆರಡು ಕಾಲ್ಗಳ ಮೇಲೆ (178)

ಒಂದೊಡಲು ನಿಂದಿರ್ಪುದೆರಡು ಕಾಲ್ಗಳ ಮೇಲೆ |
ಸಂದೇಹವುತ್ತರಗಳೆರಡರಿಂ ಮತವು ||
ದ್ವಂದ್ವಕಿಂತೊದಗದಿಹ ತರ್ಕವೇಂ ಸಿದ್ಧಾಂತ ? |
ಗೊಂದಲವೊ ಬರಿವಾದ - ಮರುಳ ಮುನಿಯ || (೧೭೮)

(ಒಂದು+ಒಡಲು)(ನಿಂದಿರ್ಪುದು+ಎರಡು)(ಸಂದೇಹ+ಉತ್ತರಗಳ್+ಎರಡರಿಂ)(ದ್ವಂದ್ವಕೆ+ಇಂತು+ಒದಗದೆ+ಇಹ)

ಒಂದು ದೇಹ(ಒಡಲು)ವು ಎರಡು ಕಾಲುಗಳ ಆಧಾರದಿಂದ ನಿಂತುಕೊಂಡಿದೆ(ನಿಂದಿರ್ಪುದು). ಇದೇ ರೀತಿಯಾಗಿ, ಸಂಶಯ ಮತ್ತು ಅದಕ್ಕೆ ಪರಿಹಾರ, ಇವೆರಡರಿಂದ ಅಭಿಪ್ರಾಯವು ರೂಪುಗೊಂಡಿದೆ. ತತ್ತ್ವವೆನ್ನುವುದು ಹೀಗೆ ಎರಡು ವಿರುದ್ಧವಾದ ಜೋಡಿಗಳಿಗೆ ಸಿಗದೆ ಇರುವ ಚರ್ಚೆಯೇನು? ಒಣ ಚರ್ಚೆ ಕೇವಲ ಗಲಿಬಿಲಿಯನ್ನುಂಟು ಮಾಡುತ್ತದೆ ಅಷ್ಟೆ.

Tuesday, March 20, 2012

ಹೃದಯಾನುಭವ ಪಿರಿದೊ? ಬುದ್ಧಿಸಾಹಸ ಪಿರಿದೊ? (177)

ಹೃದಯಾನುಭವ ಪಿರಿದೊ? ಬುದ್ಧಿಸಾಹಸ ಪಿರಿದೊ? ||
ಅಧಿಕನೇಂ ಶಿವನೊ? ವಿಷ್ಣುವೊ? ಮೂರ್ಖತರ್ಕ ||
ಹದದಿನವು ಕಣ್ಣೆರಡರಂತೊಂದುಗೂಡಿದಂ- |
ದುದಿಸುವುದು ಪರಮಾರ್ಥ - ಮರುಳ ಮುನಿಯ || (೧೭೭)

(ಹೃದಯ+ಅನುಭವ)(ಹದದಿನ್+ಅವು)(ಕಣ್ಣು+ಎರಡರಂತೆ+ಒಂದುಗೂಡಿದಂದು+ಉದಿಸುವುದು)

ಹೃದಯಕ್ಕೆ ಆಗುವ ಅನುಭವಗಳು ಹಿರಿದೋ? ಅಥವಾ ಬುದ್ಧಿಶಕ್ತಿ, ಧೈರ್ಯ ಮತ್ತು ಶೌರ್ಯಗಳು ಹಿರಿದೋ? ಶಿವನು ದೊಡ್ಡವನೋ ಅಥವಾ ವಿಷ್ಣುವು ದೊಡ್ಡವನೋ ಎನ್ನುವ ವಾದವನ್ನು ಮಾಡುವುದು ಮೂರ್ಖತನ ಮತ್ತು ಹಟವಾದವಾಗುತ್ತದೆ. ಎರಡು ಕಣ್ಣುಗಳೂ ಸೇರಿ ಒಂದು ವಸ್ತುವನ್ನು ಕ್ರಮದಿಂದ ನೋಡುವಂತೆ, ಹೃದಯದ ಅನುಭವ ಮತ್ತು ಬುದ್ಧಿ ಸಾಹಸಗಳೆರಡೂ ಸಮರಸದಿಂದ ಒಂದಾಗಿ ಸೇರಿದಾಗ, ಪರಮಾತ್ಮನ ತತ್ತ್ವವು ಗೋಚರಿಸುತ್ತದೆ.

Thursday, March 15, 2012

ಕತ್ತೆ ಮೈ ಹೊರೆತಕ್ಕೆ ನವಿಲ ಮೈ ಮೆರೆತಕ್ಕೆ (176)



ಕತ್ತೆ ಮೈ ಹೊರೆತಕ್ಕೆ ನವಿಲ ಮೈ ಮೆರೆತಕ್ಕೆ |
ಹೊತ್ತು ತರಲಾದೀತೆ ನವಿಲು ಭಾರಗಳ ||
ನೃತ್ಯಕ್ಕೆ ಗೆಜ್ಜೆ ತೊಡುವುದೆ ಕತ್ತೆ ? ಧರ್ಮಗಳ |
ಗೊತ್ತು ಗುಣಯುಕ್ತಿಯಿನೊ - ಮರುಳ ಮುನಿಯ || (೧೭೬)


(ತರಲ್+ಆದೀತೆ)


ಕತ್ತೆಯ ದೇಹವಿರುವುದು ಭಾರವನ್ನು ಹೊತ್ತುಕೊಂಡು ಹೋಗುವುದಕ್ಕೋಸ್ಕರ, ನವಿಲ ದೇಹ ಇರುವುದು ವಯ್ಯಾರದ ಪ್ರದರ್ಶನಕ್ಕೆ. ನವಿಲು ಭಾರವನ್ನು ಹೊತ್ತುಕೊಂಡು ಬರಲಾಗುತ್ತದ್ದಯೇ? ಅಥವಾ ಕತ್ತೆ ಗೆಜ್ಜೆ ಕಟ್ಟಿಕೊಂಡು ಕುಣಿಯಲಾದೀತೋ? ಯಾವುದು ಯಾವ ಕಾರ್ಯಕ್ಕೆಂಬ ಯುಕ್ತಾಯುಕ್ತ ವಿವೇಚನೆಯಿಂದ ಜೀವನವನ್ನು ನಡಸಬೇಕು. ಅದೇ ರೀತಿ ಧರ್ಮಗಳ ಉದ್ದೇಶ(ಗೊತ್ತು)ಗಳನ್ನು ಅವುಗಳ ಸ್ವಭಾವ ಮತ್ತು ಯುಕ್ತಾಯುಕ್ತತೆಯಿಂದ ತಿಳಿಯಬೇಕು.

Wednesday, March 14, 2012

ಪರಿಪರಿಯ ಮೃಷ್ಟಾನ್ನ ಭಕ್ಷ್ಯಭೋಜ್ಯಗಳು ತಾ (175)

ಪರಿಪರಿಯ ಮೃಷ್ಟಾನ್ನ ಭಕ್ಷ್ಯಭೋಜ್ಯಗಳು ತಾ-|
ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ ||
ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು |
ಹೊರೆಯೆ ಅರಿವಾಗದೊಡೆ - ಮರುಳ ಮುನಿಯ || (೧೭೫)

(ತಾವ್+ಅರಗಿ)(ಬೆರೆಯದೆ+ಇರೆ)(ಬರಿಭಕ್ತಿಗಳುಂ+ಅಂತು)(ಅರಿವು+ಆಗದೊಡೆ)

ಬಗೆಬಗೆಯ ರಸದೂಟಗಳನ್ನು ಕೂಡಿದ ತಿಂಡಿ, ತಿನಿಸುಗಳು, ನಾವು ತಿಂದನಂತರ ಜೀರ್ಣವಾಗಿ ನಮ್ಮ ರಕ್ತದಲ್ಲಿ ಸೇರದಿದ್ದಲ್ಲಿ, ಅವು ಹೊಟ್ಟೆಗೆ(ಪೊಡೆಗೆ) ಹಿಂಸೆ(ಪೀಡೆ)ಗಳನ್ನು ಮಾಡುತ್ತದೆ. ಹಾಗೆಯೇ ಕೇವಲ ಓದು, ತರ್ಕ ಮತ್ತು ಭಕ್ತಿಗಳೂ ಸಹ ಸಾರ್ಥಕ ರೀತಿಯಲ್ಲಿ ತಮ್ಮ ತಿಳುವಳಿಕೆಗೆ ನಿಲುಕದಿದ್ದರೆ ಅವು ಒಂದು ಬಾರವಾಗುತ್ತದೆಯೇ ಹೊರತು ಅವುಗಳಿಂದ ನಮಗಿನ್ಯಾವ ಪ್ರಯೋಜನವೂ ಆಗುವುದಿಲ್ಲ.

Tuesday, March 13, 2012

ನಿಗಮರ್ಷಿಗಳ ಜೀವನೋತ್ಸಾಹಭರವೆಲ್ಲಿ (174)

ನಿಗಮರ್ಷಿಗಳ ಜೀವನೋತ್ಸಾಹಭರವೆಲ್ಲಿ ? |
ಜಗ ಮಣ್ಣು ಬಾಳ್ಗಾಳಿಯೆನುವ ನಾವೆಲ್ಲಿ ? ||
ಭಗವದ್ವಿಲಾಸದಲಿ ಭಾಗಕನುಗೂಡದನು ||
ಮಗುವೆಂತು ಮನುಕುಲಕೆ - ಮರುಳ ಮುನಿಯ || (೧೭೪)

(ನಿಗಮ+ಋಷಿಗಳ)(ಜೀವನ+ಉತ್ಸಾಹಭರ+ಎಲ್ಲಿ)(ಬಾಳ್+ಗಾಳಿಯೆನುವ)
(ಭಗವತ್+ವಿಲಾಸದಲಿ)(ಭಾಗಕೆ+ಅನುಕೂಡದನು)(ಮಗು+ಎಂತು)

ವೇದ(ನಿಗಮ)ಗಳನ್ನು ನಮಗೆ ಒದಗಿಸಿದ ಪ್ರಾಚೀನ ಋಷಿಗಳು ಜೀವನವನ್ನು ನಡಸುತ್ತಿದ್ದ ಹುರುಪು ಮತ್ತು ವೇಗಗಳನ್ನು ನಾನು ಈವತ್ತು ಕಾಣುತ್ತಿಲ್ಲ. ನಾವು ಕೇಳುತ್ತಿರುವುದು ಈ ಪ್ರಪಂಚವೆಲ್ಲಾ ಕೇವಲ ಮಣ್ಣು ಮತ್ತು ಜೀವನವೆಲ್ಲಾ ಶೂನ್ಯ(ಗಾಳಿ)ವೆನ್ನುವ ಮಾತುಗಳು. ಪರಮಾತ್ಮನ ಲೀಲಾವಿಲಾಸದಲ್ಲಿ ತನ್ನ ಪಾಲಿನ ಪಾತ್ರವನ್ನು ವಹಿಸಿದವನು, ಮನುಷ್ಯ ಜಾತಿಗೆ ಹೇಗೆ ಮಗುವಾದಾನು ?

Monday, March 12, 2012

ಆದಿಕವಿಗಳ ವಿಶ್ವಸತ್ಯದೃಷ್ಟಿಯಿನೊಗೆದ (173)

ಆದಿಕವಿಗಳ ವಿಶ್ವಸತ್ಯದೃಷ್ಟಿಯಿನೊಗೆದ |
ವೇದನದಿ ಮೂರುಕವಲಾಯ್ತು ಟೀಕೆಗಳಿಂ ||
ರೋದಿಸುವ ವೈರಾಗ್ಯ, ಭೋಧೆಯಗಲಿದ ಕರ್ಮ- |
ವಾದದೊಣ ರಗಳೆಯವು - ಮರುಳ ಮುನಿಯ || (೧೭೩)

(ವಿಶ್ವಸತ್ಯದೃಷ್ಟಿಯಿನ್+ಒಗೆದ)

ಮಂತ್ರದ್ರಷ್ಟಾರರಾದ ಋಷಿಗಳು (ಆದಿಕವಿಗಳ) ಜಗತ್ತನ್ನು ಋಜುತೆಯಿಂದ ನೋಡುವುದರಿಂದ ಹುಟ್ಟಿದ (ಒಗೆದ) ವೇದವೆಂಬ ಹೊಳೆಯು ಜನಗಳ ಟೀಕೆಗಳಿಂದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತವೆಂಬ ಮೂರು ಕವಲುಗಳಾಯಿತು. ಯಾವಾಗಲೂ ಅಳುತ್ತಿರುವುದನ್ನು ಹೇಳುವ ವಿರಕ್ತಿ, ತಿಳುವಳಿಕೆ(ಬೋಧೆ)ಯನ್ನು ಕೊಡದಿರುವ ಕರ್ಮನೀತಿ, ಕೇವಲ ತರ್ಕ ಮತ್ತು ವ್ಯಾಖ್ಯಾನಗಳ ಹುರುಳಿಲ್ಲದ ಮಾತುಗಳು.

Friday, March 9, 2012

ಧೀಯುಕ್ತಿಯೊಂದಲ್ಲ, ಹೃದ್ಭಕ್ತಿಯೊಂದಲ್ಲ (172)

ಧೀಯುಕ್ತಿಯೊಂದಲ್ಲ, ಹೃದ್ಭಕ್ತಿಯೊಂದಲ್ಲ |
ಮಾಯೆಯುಂ ಪರಿದು ತತ್ತ್ವವ ತೋರ‍್ಪ ಬೆಳಕು ||
ಆಯೆರಡು ಕಣ್ಗಯೊಂದಾಗೆ ಮೂರನೆಯ ಕಣ್ |
ಧ್ಯೇಯವನು ಕಂಡೀತೊ - ಮರುಳ ಮುನಿಯ || (೧೭೨)

(ಧೀಯುಕ್ತಿ+ಒಂದಲ್ಲ)(ಹೃದ್ಭಕ್ತಿ+ಒಂದಲ್ಲ)(ಕಣ್ಗಳ್+ಒಂದಾಗಿ)

ಬುದ್ಧಿಶಕ್ತಿ ಮತ್ತು ಚಾತುರ್ಯಗಳು ಒಂದು ಕಣ್ಣಿದ್ದಂತೆ, ಹೃದಯಪೂರ್ವಕ ಭಕ್ತಿ ಇನ್ನೊಂದು ಕಣ್ಣಿದ್ದಂತೆ, ಈ ಪ್ರಪಂಚವನ್ನು ಮುಸುಕಿರುವ ಮಾಯೆಯನ್ನು ನಿವಾರಿಸಿ ಸಾರವನ್ನು ನಮಗೆ ತೋರಿಸಬಲ್ಲ ಬೆಳಕಿನ ಕಣ್ಣು ಮತ್ತೊಂದು ಕಣ್ಣು. ಈ ಮೊದಲಿನ ಎರಡು ಕಣ್ಣುಗಳೂ ಒಂದಾದಲ್ಲಿ ಮೂರನೆಯ ಕಣ್ಣಿನಿಂದ ನಮ್ಮ ಬಾಳಿನ ಗುರಿಯನ್ನು ಕಾಣಲಾದೀತು.

Thursday, March 1, 2012

ಭಯದಿ ನಿರ್ಭಯವೀವ ದೈವಚಿಹ್ನೆಯದೊಂದು (171)

ಭಯದಿ ನಿರ್ಭಯವೀವ ದೈವಚಿಹ್ನೆಯದೊಂದು |
ದಯಿತೆಯೊರ್ವಳು ಭವದ ಹೊರೆಯ ಪಾಲ್ಗೊಳಲು ||
ನಿಯತವೃತ್ತಿಯದೊಂದು ದಿನದಿನದ ಭತ್ಯಕ್ಕೆ |
ತ್ರಯದೆ ಭಾಗ್ಯವೊ ಬಾಳು - ಮರುಳ ಮುನಿಯ || (೧೭೧)

(ನಿರ್ಭಯ+ಈವ)(ದೈವಚಿಹ್ನೆ+ಅದು+ಒಂದು)(ಪಾಲ್+ಕೊಳಲು)(ನಿಯತವೃತ್ತಿ+ಅದು+ಒಂದು)

ನಿನಗೆ ಭಯವುಂಟಾದಾಗ ನಿನಗೆ ಅಭಯವನ್ನು ಕೊಡುವ ಪರಮಾತ್ಮನ ಸಂಕೇತ(ಚಿಹ್ನೆ)ವೊಂದು. ನಿನ್ನ ಜೊತೆ ಸಂಸಾರದ ಭಾರದಲ್ಲಿ ಪಾಲುಗೊಳ್ಳಲು ಪ್ರೀತಿಸುವ(ದಯಿತೆ)ವಳೊಬ್ಬಳು. ಪ್ರತಿದಿನದ ಜೀವನವನ್ನು ಸಾಗಿಸಲು ಸಂಬಳ ಬರುವ ನಿಶ್ಚಿತವಾದ ಒಂದು ಉದ್ಯೋಗ(ನಿಯತವೃತ್ತಿ). ಈ ಮೂರೂ ಸೇರಿದರೆ ಸಾರ್ಥಕ ಜೀವನ ಎನ್ನಬಹುದು.